ಮನೆ ರಾಜಕೀಯ ಕೊರೊನಾ ಹಬ್ಬಿಸಿ ಕರ್ನಾಟಕವನ್ನು ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿರುವ ಕಾಂಗ್ರೆಸ್: ಸಚಿವ ಎಸ್’ಟಿ...

ಕೊರೊನಾ ಹಬ್ಬಿಸಿ ಕರ್ನಾಟಕವನ್ನು ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿರುವ ಕಾಂಗ್ರೆಸ್: ಸಚಿವ ಎಸ್’ಟಿ ಸೋಮಶೇಖರ್

0

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಮೂಲಕ ಬೆಂಗಳೂರಿಗೆ ಕೊರೋನಾ ಹಬ್ಬಿಸಿ ಲಾಕ್ ಡೌನ್ ಮಾಡುವಂತಹ ಪರಿಸ್ಥಿತಿ ನಿರ್ಮಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಅವರಿಗೆ ಯೋಜನೆ ಜಾರಿಗಿಂತ ಕೊರೋನಾ ಹಬ್ಬಿಸಿ ಕರ್ನಾಟಕವನ್ನು ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗಂಭೀರವಾಗಿ ಆರೋಪಿಸಿದ್ದಾರೆ.

ಕೋವಿಡ್ ನಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಂತು ಸಲಹೆಗಳನ್ನು ನೀಡುವ ಮೂಲಕ ಜನಹಿತ ಕಾಪಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ಪಾದಯಾತ್ರೆ ಹೆಸರಿನಲ್ಲಿ ಕೊರೋನಾ ಹರಡುವ ಮೂಲಕ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಜನಜಾತ್ರೆ ಮಾಡಿಕೊಂಡು ಬೆಂಗಳೂರಿಗೆ ಕೋವಿಡ್ ಹಬ್ಬಿಸುವ ಕೆಲಸ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಕೊರೋನಾ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.

ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಮೇಕೆದಾಟು ಯೋಜನೆ ಬಗ್ಗೆ ಆಸಕ್ತಿ ಇದ್ದಿದ್ದರೆ ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ತಮಿಳುನಾಡಿನ ಮುಖ್ಯಮಂತ್ರಿ ಜೊತೆ ಮಾತನಾಡಬಹುದಿತ್ತು. ಸುಪ್ರೀಂಕೋರ್ಟ್ ನಲ್ಲಿರುವ ದಾವೆಯನ್ನು ಹಿಂಪಡೆಯುವಂತೆ ಡಿಎಂಕೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿತ್ತು. ಆದರೆ ಕಾಂಗ್ರೆಸ್ ಆ ರೀತಿ ಮಾಡುವುದಿಲ್ಲ, ಏಕೆಂದರೆ ಅವರಿಗೆ ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ ಅದನ್ನು ಜೀವಂತವಾಗಿಟ್ಟು ರಾಜಕೀಯ ಮಾಡುವುದರಲ್ಲೇ ಹೆಚ್ಚು ಆಸಕ್ತಿ.

ಅಷ್ಟಕ್ಕೂ ಮೇಕೆದಾಟು ವಿಚಾರವಾಗಿ ಕಾಂಗ್ರೆಸಿನವರು ಎಷ್ಟು ಬಾರಿ ಚರ್ಚಿಸಿದ್ದಾರೆ? ಸದನದಲ್ಲಿ ಮಾತನಾಡಿದ್ದಾರೆ? ಅಧಿಕಾರಾವಧಿಯಲ್ಲಿ ಡಿಪಿಆರ್ ಸಲ್ಲಿಕೆ ಮಾಡಲು ವಿಳಂಬ ಮಾಡಿದ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ ಬಿಜೆಪಿ ಸರ್ಕಾರ 2019ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೆನ್ನೈ ಹಸಿರುಪೀಠ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು. ಅಂತರರಾಜ್ಯ ಜಲವಿವಾದ ಬಗೆಹರಿಸಿಕೊಳ್ಳದೆ 2013 ರಿಂದ 2019ರವರೆಗೆ ಕಾಲಹರಣ ಮಾಡಿದ ಕಾಂಗ್ರೆಸ್ ಈಗ ಪಾದಯಾತ್ರೆ ನಾಟಕವಾಡುತ್ತಿದೆ. ಆದರೆ ಈ ಪಾದಯಾತ್ರೆ ಕಾಂಗ್ರೆಸ್ ನ ಹಲವು ನಾಯಕರಿಗೆ ಇಷ್ಟವಿಲ್ಲ. ಇದೊಂದು ಒನ್ ಮ್ಯಾನ್ ಶೋನಂತಾಗಿದೆ.

ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಹೊರಟಿರುವ ಕಾಂಗ್ರೆಸಿಗೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಮುಂದೆ ಕೋವಿಡ್ ನಿಂದಾಗುವ ಹಾನಿಗೆ ಕಾಂಗ್ರೆಸ್ ನಾಯಕರೇ ನೇರ ಕಾರಣವಾಗಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.