ಮನೆ ಸುದ್ದಿ ಜಾಲ ಪ್ರಕಾಶಕರ ಸಮ್ಮೇಳನಾಧ್ಯಕ್ಷರಾಗಿ ಟಿ.ಎಸ್. ಛಾಯಾಪತಿ ಆಯ್ಕೆ

ಪ್ರಕಾಶಕರ ಸಮ್ಮೇಳನಾಧ್ಯಕ್ಷರಾಗಿ ಟಿ.ಎಸ್. ಛಾಯಾಪತಿ ಆಯ್ಕೆ

0

ಬೆಂಗಳೂರು: ಮಾರ್ಚ್ ತಿಂಗಳಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಾಶಕರ ಸಮ್ಮೇಳನವನ್ನು ಮೈಸೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಎರಡನೇ ಬಾರಿಗೆ ಆಯೋಜಿಸಲಾಗುತ್ತಿರುವ ಈ ಪ್ರಕಾಶಕರ ಸಮ್ಮೇಳನಕ್ಕೆ ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯ ಟಿ.ಎಸ್. ಛಾಯಾಪತಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

ಮಾರ್ಚ್ ಎರಡನೇ ವಾರದಲ್ಲಿ ಈ ಪ್ರಕಾಶಕರ ಸಮ್ಮೇಳನವನ್ನು ಆಯೋಜಿಸಲಾಗುವುದು.  ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿಯೇ ಆರು ದಿನಗಳ ಕಾಲ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಸಹ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಪರಿಚಯ

ಟಿ.ಎಸ್. ಛಾಯಾಪತಿ ಅವರು ಕನ್ನಡ ಪುಸ್ತಕ ಲೋಕ ಕಂಡ ಅಪರೂಪದ ಪ್ರಕಾಶಕ ರಲ್ಲಿ ಒಬ್ಬರು. ಕನ್ನಡದ ಸುಪ್ರಸಿದ್ಧ ಸಾಹಿತಿ ತ.ಸು. ಶಾಮರಾಯರ ಪುತ್ರರಾದ ಛಾಯಾಪತಿ ಅವರು ಹುಟ್ಟಿದ್ದು 1944 ರಲ್ಲಿ, ಮೈಸೂರು ಇವರ ತವರೂರು, ಸಹಜವಾಗಿಯೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡವರು.

ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆ ಹೆಸರಿನಲ್ಲಿ 1950ರಲ್ಲಿ ಪ್ರಕಾಶನ ಸಂಸ್ಥೆ ಆರಂಭಿಸಿದರು. ಇದರ ಮೂಲಕ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಛಾಯಾಪತಿ ಅವರು ಸ್ವತಃ ಲೇಖಕರು, 23ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪುಸ್ತಕಲೋಕಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ.

ತಮ್ಮ ಪ್ರಕಾಶನ ಸಂಸ್ಥೆಯ ಮೂಲಕ ಕನ್ನಡದ ಅನೇಕ ದಿಗ್ಗಜ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿರುವ ಛಾಯಾಪತಿ ಅವರು ನಾಡಿನ ಉದ್ದಗಲಕ್ಕೂ ಎಲ್ಲ ಪ್ರಕಾರದ ಸಾಹಿತಿಗಳಿಂದ ಮುಕ್ತ ಪ್ರಶಂಸೆಗೆ ಪಾತ್ರರಾದವರು.

 ಇವರ ಪ್ರಕಾಶನ ಸಂಸ್ಥೆಗೆ 1999 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿತು. ಕನ್ನಡ ಸಾಹಿತ್ಯ ಪರಿಷತ್ತಿನಿಂದಲೂ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಇವರಿಗೆ ಲಭಿಸಿದೆ.

ಇದಲ್ಲದೆ. ಅಸಂಖ್ಯಾತ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಛಾಯಾಪತಿ ನಿಗರ್ವಿ, ಸರಳ ಮತ್ತು ಸಜ್ಜನ ವ್ಯಕ್ತಿ ಎಂದು ಹೆಸರಾಗಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಾಶನ ಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಅನನ್ಯ ಸೇವೆಗಾಗಿ ಇವರನ್ನು ಮೈಸೂರಿನಲ್ಲಿ ಆಯೋಜಿಸಿರುವ ಎರಡನೇ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಹಿಂದಿನ ಲೇಖನಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ ಅಹೋರಾತ್ರಿ ಧರಣಿ
ಮುಂದಿನ ಲೇಖನಆದೇಶವಿಲ್ಲದೆ ಅರಣ್ಯ ಇಲಾಖೆಗೆ ಸೇರಿದ ಮರಗಳ ಕಟಾವು