ಮನೆ ರಾಷ್ಟ್ರೀಯ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಚಕ್ರಗಳು ಜಾಮ್: ತಪ್ಪಿದ ಅನಾಹುತ

ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಚಕ್ರಗಳು ಜಾಮ್: ತಪ್ಪಿದ ಅನಾಹುತ

0

ಉತ್ತರ ಪ್ರದೇಶ: ದೆಹಲಿ-ಡೆಹ್ರಾಡೂನ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಇಂಜಿನ್ ಚಕ್ರಗಳು ಇದ್ದಕ್ಕಿದಂತೆ ಜಾಮ್ ಆಗಿ 10 ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಾಗಲ್ ರೈಲು ನಿಲ್ದಾಣ ಬಳಿ ನಡೆಯಿತು.

ಜಾಮ್ ಆಗಿದ್ದ ರೈಲಿನ ಚಕ್ರಗಳು ಹಳಿಯ ಮೇಲೆ ಉಜ್ಜಿಕೊಂಡು ಹೋಗಿವೆ. ಇದರಿಂದ ಸುಮಾರು 50 ಮೀಟರ್‌ಗಳಷ್ಟು ಟ್ರ‍್ಯಾಕ್‌ನ ಪ್ಯಾಂಡ್ರೋಲ್ ಕ್ಲಿಪ್‌ಗಳು ಕಿತ್ತುಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಹೊಸ ಇಂಜಿನ್ ತರಿಸಿ ರೈಲನ್ನು ಮುಂದಕ್ಕೆ ಕಳುಹಿಸಿದರು. ಇದಕ್ಕೂ ಮುನ್ನ ರೈಲು ಸುಮಾರು ಎರಡು ಗಂಟೆಗಳ ಕಾಲ ನಿಂತಿತ್ತು. ಇದರಿಂದಾಗಿ 10ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಯಿತು.

ಘಟನೆ ಹಿನ್ನೆಲೆ: ಡೆಹ್ರಾಡೂನ್ ಮತ್ತು ದೆಹಲಿ ನಡುವೆ ಸಂಚರಿಸುವ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲು, ಡೆಹ್ರಾಡೂನ್‌ನಿಂದ ಹೊರಟಿತ್ತು. ರೈಲು 11 ಗಂಟೆಯ ಸುಮಾರಿಗೆ ನಾಗಲ್ ನಿಲ್ದಾಣ ದಾಟಿ ಮಿರ್ಪುರ್ ಗೇಟ್ ತಲುಪಿದಾಗ, ಇದ್ದಕ್ಕಿದ್ದಂತೆ ಇಂಜಿನ್ ಚಕ್ರಗಳು ಜಾಮ್ ಆಗಿವೆ. ತಕ್ಷಣ ಎಚ್ಚೆತ್ತ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ಚಕ್ರಗಳು ಹಳಿಯ ಮೇಲೆ ಉಜ್ಜಿಕೊಂಡು ಹೋದ ಪರಿಣಾಮ ಹಳಿಯ ಪ್ಯಾಂಡ್ರೋಲ್ ಕ್ಲಿಪ್‌ಗಳು ಕಿತ್ತುಹೋಗಿವೆ.