ಮಂಡ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಅದನ್ನು ಕರ್ನಾಟಕದ ಜನ ಕುತೂಹಲದಿಂದ ನೋಡುತ್ತಾರೆ. ಅದರಲ್ಲಂತೂ ಕಳೆದ ಲೋಕಸಭಾ ಚುನಾವಣೆ ಹಲವು ಅದ್ಭುತಗಳಿಂದ ಇತಿಹಾಸ ಸೃಷ್ಟಿ ಮಾಡಿದೆ. ಹೀಗಿರುವಾಗ ಇದೀಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಯಾವ ರೀತಿಯಲ್ಲಿ ನಡೆಯಬಹುದು ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು. ಇಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೇ ಮತದಾರರಾಗಿರುವುದರಿಂದ ಪ್ರತಿಯೊಬ್ಬ ಮತದಾರನ ಮೇಲೆಯೂ ನಿಗಾವಹಿಸಲೇ ಬೇಕಾಗಿದೆ ಮತ್ತು ಅವನು ನೀಡುವ ತೀರ್ಪಿಗೆ ತಲೆ ಬಾಗಲೇಬೇಕಾಗಿದೆ.
ಕಳೆದ ಲೋಕಸಭಾ ಚುನಾವಣೆಯಿಂದೀಚೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಹೆಚ್ಚಿನ ಹಾನಿಯಾಗಿದೆ. ಈ ಪಕ್ಷಗಳಲ್ಲಿದ್ದ ಕಾರ್ಯಕರ್ತರ ಪೈಕಿ ಹೆಚ್ಚಿನವರು ಅಂಬರೀಶ್ ಅಭಿಮಾನಿಗಳು. ಹೀಗಾಗಿ ಅವರು ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ. ಆದ್ದರಿಂದ ಸಂಸದೆ ಸುಮಲತಾ ಅಂಬರೀಶ್‌ರನ್ನು ಒಲೈಸಿಕೊಂಡರೆ ತಾವು ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಚಾರಗಳು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿದೆ.
ಬಹುಶಃ ಭಾರತದ ಚುನಾವಣಾ ಇತಿಹಾಸದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿಗೆ ಮೂರು ಪಕ್ಷಗಳ ಕಾರ್ಯಕರ್ತರು ಬೆಂಬಲ ನೀಡಿದ್ದು ಮತ್ತು ಚುನಾವಣಾ ಪ್ರಚಾರ ಸಭೆಗಳಲ್ಲಿ ಮೂರು ಪಕ್ಷಗಳ ಬಾವುಟಗಳು ಹಾರಾಡಿದ್ದನ್ನು ಯಾರೂ ನೋಡಿರಲಿಲ್ಲ. ಆದರೆ ಅಂತಹದ್ದೊಂದು ಪವಾಡ ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದಿತ್ತು.