ರಾವತ್ ದಂಪತಿಗಳ ಅಂತ್ಯ ಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಚಿತಾಗಾರದಲ್ಲಿ ನಡೆದಿದೆ. ಸುಮಾರು ಹತ್ತು ಕಿಲೋಮೀಟರ್ ಸಾಗಿದ ಅಂತಿಮಯಾತ್ರೆಯ ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಪಾರ್ಥಿವ ಶರೀರವನ್ನು ಹಿಂಬಾಲಿಸಿದ್ದರು. ದೇಶ ವಿದೇಶದ ಕೋಟ್ಯಂತರ ಜನರು ಅಂತಿಮ ಸಂಸ್ಕಾರವನ್ನು ವೀಕ್ಷಿಸಿದ್ದರು. ಇವೆಲ್ಲದರ ನಡುವೆ, ಜನವರಿಯಲ್ಲಿ ಪ್ರಕಟಗೊಂಡಿದ್ದ ಮ್ಯಾಗಜೀನ್ ಒಂದರಲ್ಲಿ ಸೇನಾ ಮುಖ್ಯಸ್ಥರ ಸಾವಿನ ಬಗ್ಗೆ ಉಲ್ಲೇಖ ಮಾಡಿರುವುದು ಭಾರೀ ಸಂಚಲನ ಮೂಡಿಸುತ್ತಿದೆ.
ಈ ಹಿಂದೆ ಕೋಡಿಮಠದ ಶ್ರೀಗಳು ಮತ್ತು ಮೈಲಾರ ಭವಿಷ್ಯದಲ್ಲೂ ಗಣ್ಯವ್ಯಕ್ತಿಗಳ ಸಾವು ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು. ಆದರೆ, ಜ್ಯೋತಿಷ್ಯ ಮಾಸಿಕದಲ್ಲಿ ಸೇನಾ ಮುಖ್ಯಸ್ಥರೆಂದೇ ಉಲ್ಲೇಖಿಸಲಾಗಿದೆ. ಜೊತೆಗೆ, ಡಿಸೆಂಬರ್ ತಿಂಗಳ ಒಂದು ದಿನ ಭಾರೀ ಗಂಡಾತರ ಎದುರಾಗಲಿದೆ ಎಂದೂ ಉಲ್ಲೇಖಿಸಲಾಗಿದೆ.