ಬೆಂಗಳೂರು: ಯೋಜನೆ ಶೀಘ್ರವಾಗಿ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಬುಧವಾರ 4ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಪಾದಯಾತ್ರೆ ವಿರುದ್ಧ ಕೇಸು ಹೈಕೋರ್ಟ್ ಅಂಗಳಕ್ಕೆ ತಲುಪಿದ್ದು, ಹೈಕೋರ್ಟ್ ಗರಂ ಆಗಿದೆ.
ಇಂದು ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರ ಮಧ್ಯೆ ಪಾದಯಾತ್ರೆ ನಡೆಸುವ ಅಗತ್ಯವೇನಿದೆ ಎಂದು ಛೀಮಾರಿ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ನೋಟಿಸ್ ನೀಡಿದೆ. ರಾಮನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಕೆಪಿಸಿಸಿಗೂ ರಾಜ್ಯ ಹೈಕೋರ್ಟ್ ನೋಟಿಸ್ ನೀಡಿದೆ.
ಪಾದಯಾತ್ರೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಪ್ರಸಾದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಿದ್ದರು. ಕೊರೋನಾ ಕೇಸ್ ಹೆಚ್ಚುತ್ತಿರೋ ಹೊತ್ತಲ್ಲಿ ಪಾದಯಾತ್ರೆ ಬೇಕಿತ್ತಾ ಎಂದು PILನಲ್ಲಿ ಪ್ರಶ್ನಿಸಿದ್ದರು. ಇದೀಗ ಹೈಕೋರ್ಟ್, ಪಾದಯಾತ್ರೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ, ಜನವರಿ 14ರಂದು ನಮಗೆ ಉತ್ತರ ಕೊಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಇಂದು ತುರ್ತು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವಾಗ ನೀವು ಹೇಗೆ ಪಾದಯಾತ್ರೆ ನಡೆಸುತ್ತೀರಿ, ಪಾದಯಾತ್ರೆ ನಡೆಸಲು ಸರ್ಕಾರದ ಅನುಮತಿ ತೆಗೆದುಕೊಂಡಿದ್ದೀರಾ, ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿಮ್ಮ ಕ್ರಮವೇನು, ನೀವು ಪಾಲಿಸುತ್ತಿರುವ ಕೊರೋನಾ ನಿಯಮಗಳೇನು ನಾಳೆಯೊಳಗೆ ಉತ್ತರಿಸಿ ಎಂದು ಹೈಕೋರ್ಟ್ ವಿಭಾಗೀಯ ಪೀಠ ಕೆಪಿಸಿಸಿಗೆ ನೊಟೀಸ್ ಜಾರಿ ಮಾಡಿದೆ.
ಜ.14ಕ್ಕೆ ವಿಚಾರಣೆ: ಇನ್ನು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ನೀವು ರ್ಯಾಲಿಗೆ ಅನುಮತಿ ನೀಡಿಲ್ಲವೆಂದಾದರೆ ಪಾದಯಾತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಯಾರಿಗಾಗಿ ಕಾಯುತ್ತಿದ್ದೀರಿ, ಕೋವಿಡ್ ಬಿಗಡಾಯಿಸುತ್ತಿರುವಾಗ ನೀವು ಶಿಷ್ಠಾಚಾರ ಪಾಲಿಸುತ್ತಿದ್ದೀರಾ ಎಂದು ಉತ್ತರಿಸಿ ಎಂದು ರಾಜ್ಯ ಸರ್ಕಾರಕ್ಕೂ ನೊಟೀಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದೆ.