ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಂದಾಗಿರುವುದು ಹಾಸ್ಯಾಸ್ಪದ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದರು. ಮಂಗಳವಾರ ಮೈಸೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಸಿದ್ದರಾಮಯ್ಯ ಹಾಗೂ ಜಿ. ಟಿ. ದೇವೇಗೌಡ ಒಂದಾಗಿರುವುದು ಒಂದು ರೀತಿಯ ನಗೆಪಾಟಲಿಗೀಡಾಗಿದೆ. ಇದೇ ಜಿ. ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಮಾಡಿದ್ದರು. ಜನತಾ ಪರಿವಾರ ಕಟ್ತಿನಿ ಅಂತ ಓಡಾಡಿದ್ದರು” ಎಂದರು.
“ಇದೇ ಸಿದ್ದರಾಮಯ್ಯ ರಾತ್ರೋರಾತ್ರಿ ಊರು ಬಿಟ್ಟು ಬದಾಮಿಗೆ ಹೋಗಿ ನಿಂತರು. ಈ ವೇಳೆ 35 ಸಾವಿರ ಮತಗಳಿಂದ ಸೋತು ಸಿದ್ದರಾಮಯ್ಯಗೆ ಬುದ್ದಿ ಬಂದಿಲ್ಲ. ಸಿಎಂ ಆಗಿ ನೀವೆ ಹೆದರಿಕೊಂಡು ಓಡಿಹೋದ್ರೆ ಹೇಗೆ?. ವೀರಾವೇಷದ ಮಾತಗಳನ್ನು ಆಡಿದಿರಿ. ಆದರೆ ಹೆದರಿ ಬಾದಾಮಿಗೆ ಹೋದರಿ” ಎಂದು ವ್ಯಂಗ್ಯವಾಡಿದರು.