ಮನೆ ರಾಜ್ಯ ಲಾಂಟನಾ ಕರಕುಶಲ ವಸ್ತು ತಯಾರಕರ ಪ್ರೋತ್ಸಾಹಕ್ಕೆ 1 ಕೋಟಿ ರೂ.: ಈಶ್ವರ ಖಂಡ್ರೆ

ಲಾಂಟನಾ ಕರಕುಶಲ ವಸ್ತು ತಯಾರಕರ ಪ್ರೋತ್ಸಾಹಕ್ಕೆ 1 ಕೋಟಿ ರೂ.: ಈಶ್ವರ ಖಂಡ್ರೆ

0

ಬೆಂಗಳೂರು: ಅರಣ್ಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಮಾರಕವಾಗಿರುವ ಲಾಂಟನಾ ಕಳೆಯಿಂದ ಆನೆ, ಕಾಡೆಮ್ಮೆ, ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಆದಿವಾಸಿ ಸಮುದಾಯದವರಿಗೆ ತರಬೇತಿ ಮತ್ತು ಪೋತ್ಸಾಹ ನೀಡಲು 1 ಕೋಟಿ ರೂ. ನೆರವು ನೀಡುವ ಬಗ್ಗೆ ಪರಿಶೀಲಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ಲಾಲ್ ಬಾಗ್ ನಲ್ಲಿಂದು ಲಾಂಟನಾ ಕಡ್ಡಿಗಳಿಂದ ತಯಾರಿಸಿದ ಕಾಡೆಮ್ಮೆ ಮತ್ತು ಆನೆಯ ಆಕೃತಿಗಳನ್ನು ಅನಾವರಣ ಮಾಡಿ ಮಾತನಾಡಿದ ಅವರು, ಮುಳ್ಳಿನಿಂದ ಕೂಡಿದ ಲಾಂಟನಾ ರಾಜ್ಯದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ ಮೊದಲಾದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ವ್ಯಾಪಿಸಿದ್ದು, ಇದರಿಂದ ಆನೆ, ಜಿಂಕೆ ಇತ್ಯಾದಿ ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲೂ ಸಿಗದಂತಾಗಿದೆ. ಹೀಗಾಗಿ ಈ ಕಳೆಯನ್ನು ತೆಗೆಯುವುದು ಅನಿವಾರ್ಯವಾಗಿದ್ದು, ಆದಿವಾಸಿಗಳ ನೆರವಿನಿಂದ ಈ ಕಳೆ ತೆಗೆಸಿ, ಅಲಂಕಾರಿಕ ವಸ್ತು ತಯಾರಿಸಿದರೆ ಅದರಿಂದ ಜೀವನೋಪಾಯವೂ ಆಗುತ್ತದೆ, ಕಾಡಿನ ಕಳೆಯ ಸಮಸ್ಯೆಗೂ ಪರಿಹಾರ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಲಾಂಟನಾದಿಂದ ತಯಾರಿಸಿದ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಮತ್ತು ವನ್ಯಜೀವಿ ಆಕೃತಿಗಳಿಗೆ ದೇಶದಾದ್ಯಂತ ಅಷ್ಟೇ ಅಲ್ಲ ವಿದೇಶದಲ್ಲಿಯೂ ಬೇಡಿಕೆ ಸೃಷ್ಟಿಸಲು ವ್ಯಾಪಕ ಪ್ರಚಾರ ನೀಡುವ ಮತ್ತು ಆನ್ ಲೈನ್ ಮೂಲಕ ಮಾರಾಟ ಮಾಡಲು ವೇದಿಕೆ ಕಲ್ಪಿಸಲು ಕ್ರಮ ವಹಿಸುವ ಸಾಧ್ಯತೆಗಳ ಕುರಿತಂತೆ ವರದಿ ಸಲ್ಲಿಸಲು ಸ್ಥಳದಲ್ಲಿ ಹಾಜರಿದ್ದ ಹಿರಿಯ ಐ.ಎಫ್.ಎಸ್ ಅಧಿಕಾರಿ ಕುಮಾರ್ ಪುಷ್ಕರ್ ಅವರಿಗೆ ಸೂಚನೆ ನೀಡಿದರು.

ಲಾಂಟನಾ ವಿದೇಶದಿಂದ ನಮ್ಮ ದೇಶಕ್ಕೆ ಆಗಮಿಸಿದ ಕಳೆಯಾಗಿದೆ. ಇದು ಕಾಡನ್ನು ರಕ್ತ ಬೀಜಾಸುರನಂತೆ ಆವರಿಸುತ್ತಿದ್ದು ಇದನ್ನು ವೈಜ್ಞಾನಿಕವಾಗಿ ನಿರ್ಮೂಲನೆ ಮಾಡುವ ಅಗತ್ಯವಿದೆ. ಲಾಂಟನಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬುಡಸಮೇತ ತೆಗೆದು ಕಲಾಕೃತಿ ರಚಿಸಲು ಬುಡಕಟ್ಟು ಮತ್ತು ಆದಿವಾಸಿಗಳಿಗೆ ಸೂಕ್ತ ತರಬೇತಿ ನೀಡಿದರೆ ಸಾವಿರಾರು ಜನರಿಗೆ ಉದ್ಯೋಗಾವಕಾಶ ಲಭಿಸುತ್ತದೆ. ಲಾಂಟನಾ ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ಹೇಳಿದರು.

ಸಹಬಾಳ್ವೆ ಅಗತ್ಯ:

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮನುಷ್ಯನಂತೆಯೇ ಬದುಕುವ ಹಕ್ಕಿದೆ. ಕಾಡಿನಂಚಿನಲ್ಲಿದ್ದ ನಮ್ಮ ಪೂರ್ವಿಕರು ಸೂಕ್ಷ್ಮ ಸಂವೇದಿಗಳಾಗಿದ್ದರು. ಅವರು ವನ್ಯಜೀವಿಗಳೊಂದಿಗೆ ಸಹಬಾಳ್ವೆಯಿಂದ ಬದುಕುವುದನ್ನು ಅರಿತಿದ್ದರು. ಇಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು

ಹಿಂದಿನ ಲೇಖನಕೊಲ್ಲೂರು ಮೂಕಾಂಬಿಕಾ ದೇವಾಲಯ ಸಮೀಪ ಹೆದ್ದಾರಿಗೆ ಭೂ ಸ್ವಾಧೀನ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ನಿರ್ದೇಶನ
ಮುಂದಿನ ಲೇಖನನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು