ಬೆಂಗಳೂರು: ಅಂತರರಾಜ್ಯ ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂತೋಷ್ ಸೇರಿದಂತೆ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಅ.7 ರಂದು ಹೆಚ್.ಎಸ್. ಉಮೇಶ್ ಅಡಿಕೆ ವ್ಯಾಪಾರ ಸಲುವಾಗಿ ನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿಯನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಚಿತ್ರದುರ್ಗದಲ್ಲಿ ಅಡಿಕೆ ಕೊಂಡುಕೊಳ್ಳಲು ಬರುತ್ತಾರೆ. ಆದರೆ ಉಮೇಶ್ ಅವರಿಗೆ ಅಲ್ಲಿ ಅಡಿಕೆ ಸಿಗುವುದಿಲ್ಲ. ನಂತರ ಶಿರಾದಲ್ಲಿ ಅಡಿಕೆ ಕೊಂಡುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಸಾಧ್ಯವಾಗುವುದಿಲ್ಲ. ಕೊನೆಗೆ ತುಮಕೂರಿನಲ್ಲಾದರೂ ಸಿಗಬಹುದಾ ಎಂದು ಬಂದರೇ ಇಲ್ಲಿಯೂ ಕೂಡ ಉಮೇಶ್ ಅವರಿಗೆ ಅಡಿಕೆ ಸಿಗುವುದಿಲ್ಲ.
ಬಳಿಕ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ಪಿಜಿಯೊಂದರಲ್ಲಿರುವ ತಮ್ಮ ಮತ್ತು ತಮ್ಮ ಸ್ನೇಹಿತರ ಮಕ್ಕಳನ್ನು ಭೇಟಿಯಾಗಿ ಹೋಗೋಣ ಎಂದು ರಾಜಧಾನಿಗೆ ಬರುತ್ತಾರೆ. ಹೀಗೆ ಬಂದವರು ನೇರವಾಗಿ ಗಾಂಧೀನಗರಕ್ಕೆ ಬಂದು, ಹೊಟೇಲ್ ವೊಂದರ ಮುಂಭಾಗದಲ್ಲಿ ಕಾರು ನಿಲ್ಲಿಸಿ, ಊಟ ಮಾಡುತ್ತಾರೆ.
ಆ ಬಳಿಕ ಚಂದ್ರಾಲೇಔಟ್ ನಲ್ಲಿ ಮಕ್ಕಳನ್ನು ಭೇಟಿಯಾಗಿ ಚಿತ್ರದುರ್ಗಕ್ಕೆ ವಾಪಸ್ ಹೊರಡುವದಾರಿ ಮಧ್ಯೆ ದಾಬಸ್ ಪೇಟೆಯಲ್ಲಿ ಟೀ ಕುಡಿದು, ಚಿತ್ರದುರ್ಗಕ್ಕೆ ತೆರಳುತ್ತಾರೆ. ತಮ್ಮೂರಾದ ಭೀಮಸಮುದ್ರಕ್ಕೆ ರಾತ್ರಿ 7:45ಕ್ಕೆ ತಲುಪುತ್ತಾರೆ. ಆಗ ಕಾರಿನ ಡಿಕ್ಕಿ ತೆಗೆದು ನೋಡಿದಾಗ ಹಣ ಮಾಯವಾಗಿರುತ್ತೆ.
ನಂತರ ಉಮೇಶ್ ವಾರ, 10 ದಿವಸ ಬಿಟ್ಟು ಕಾರು ಡ್ರೈವರ್ ಮೇಲೆ ಸಂಶಯ ವ್ಯಕ್ತಪಡಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಾರ್ ಡ್ರೈವರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಡುತ್ತಾನೆ. ಪೊಲೀಸರಿಂದ ತನಿಖೆ ಮುಂದುವರೆದಿದೆ.