ಮನೆ ರಾಜಕೀಯ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತ: ಕಾಂಗ್ರೆಸ್ ಘೋಷಣೆ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತ: ಕಾಂಗ್ರೆಸ್ ಘೋಷಣೆ

0

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ಘೋಷಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ  2,000 ನೆರವು ಹಾಗೂ 200 ಯೂನಿಟ್‌’ವರೆಗೆ ಉಚಿತ ವಿದ್ಯುತ್‌ ಪೂರೈಸುವ ‘ಗ್ಯಾರಂಟಿ’ ಭರವಸೆಗಳನ್ನು ಕಾಂಗ್ರೆಸ್‌ ಈ ಹಿಂದೆ ಪ್ರಕಟಿಸಿತ್ತು.

ಮೂರನೇ ‘ಗ್ಯಾರಂಟಿ’ ಭರವಸೆಯಾಗಿ ತಲಾ 10 ಕೆ.ಜಿ. ಅಕ್ಕಿಯ ಭರವಸೆಯನ್ನು ಪ್ರಕಟಿಸಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಮಾತನಾಡಿ, ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿದ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರತೀ ಕೆ.ಜಿ.ಗೆ  3ರ ದರದಲ್ಲಿ ಅಕ್ಕಿ ಒದಗಿಸುತ್ತಿತ್ತು. 2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿ‍ಪಿಎಲ್‌ ಕುಟುಂಬಗಳಿಗೆ ಪ್ರತೀ ಕೆ.ಜಿ.ಗೆ ₹ 1ರ ದರದಲ್ಲಿ 30 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ನಂತರ ಉಚಿತವಾಗಿ ಪ್ರತಿ ಸದಸ್ಯರಿಗೆ ತಲಾ 7 ಕೆ.ಜಿ. ವಿತರಿಸಲಾಗುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದನ್ನು 5 ಕೆ.ಜಿ.ಗೆ ಇಳಿಸಿದೆ ಎಂದರು.

ಈಗ ಅಕ್ಕಿ ವಿತರಣೆಗೆ  4,000 ಕೋಟಿಯಿಂದ  5,000 ಕೋಟಿಯವರೆಗೆ ವೆಚ್ಚವಾಗುತ್ತಿದೆ. ತಲಾ 10 ಕೆ.ಜಿ. ವಿತರಿಸಿದರೆ ಇನ್ನೂ  4,000 ಕೋಟಿ ಹೆಚ್ಚಿನ ವೆಚ್ಚವಾಗಬಹುದು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬುದು ಕಾಂಗ್ರೆಸ್‌ ಪಕ್ಷದ ಉದ್ದೇಶ ಎಂದು ಹೇಳಿದರು.