ನವದೆಹಲಿ: ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಶ್ನೋಯ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.
ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದ್ದಾರೆ.
‘ಭಾನು’ ಎಂದೂ ಕರೆಯಲ್ಪಡುವ ಅನ್ಮೋಲ್ ಬಿಷ್ಣೋಯ್ ಅವರು ನಕಲಿ ಪಾಸ್‌ಪೋರ್ಟ್ ಮೂಲಕ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿ ಕೀನ್ಯಾ ಮತ್ತು ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ.
2022 ರಲ್ಲಿ ಪಂಜಾಬ್ ಗಾಯಕ ಸಿಧು ಮೊಸ್ಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಪ್ರಕರಣ ಸೇರಿ ಅನ್ಮೋಲ್ ಬಿಷ್ಣೋಯ್ ವಿರುದ್ಧ 18 ಪ್ರಕರಣಗಳು ದಾಖಲಾಗಿದೆ. ಇದೇ ವರ್ಷ ಏಪ್ರಿಲ್ 14 ರಂದು ಸಲ್ಮಾನ್ ಖಾನ್ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅನ್ಮೋಲ್ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು, ಅಷ್ಟು ಮಾತ್ರವಲ್ಲದೆ ಇತ್ತೀಚಿಗೆ ಅಕ್ಟೋಬರ್ 12 ರಂದು ತನ್ನ ಮಗನ ಕಚೇರಿಯ ಹೊರಗೆ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಕೊಂದ ಶೂಟರ್‌ಗಳೊಂದಿಗೆ ಅನ್ಮೋಲ್ ಬಿಷ್ಣೋಯ್ ಸಂಪರ್ಕದಲ್ಲಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅನ್ಮೋಲ್ ಕೆನಡಾ ಮತ್ತು ಯುಎಸ್‌ನಿಂದ ಇದ್ದುಕೊಂಡೇ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು ತನ್ನ ಗ್ಯಾಂಗ್ ನ ಸದಸ್ಯರನ್ನು ಸ್ನ್ಯಾಪ್ ಚಾಟ್ ಮೂಲಕ ಸಂಪರ್ಕಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.