ಮನೆ ಸುದ್ದಿ ಜಾಲ ಚಿಕ್ಕಮಗಳೂರು ಕಾಡಿನಲ್ಲಿ ನಾಪತ್ತೆಯಾಗಿದ್ದ 10 ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಡ್ರೈವರ್ ಕಾರ್ಯಾಚರಣೆಯ ಬಳಿಕ ಪತ್ತೆ!

ಚಿಕ್ಕಮಗಳೂರು ಕಾಡಿನಲ್ಲಿ ನಾಪತ್ತೆಯಾಗಿದ್ದ 10 ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಡ್ರೈವರ್ ಕಾರ್ಯಾಚರಣೆಯ ಬಳಿಕ ಪತ್ತೆ!

0

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಬಲ್ಲಾಳರಾಯನ ದುರ್ಗದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಚಿತ್ರದುರ್ಗದ ಮೆಡಿಕಲ್ ಕಾಲೇಜಿನ 11 ಮಂದಿ ತಂಡ ಕಾಡಿನಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಘಟನೆ ಒಂದು ಆತಂಕದ ಕ್ಷಣಗಳನ್ನು ಹುಟ್ಟುಹಾಕಿತು. ಆದರೆ, ಬಾಳೂರು ಪೊಲೀಸರ ಮತ್ತು ಸ್ಥಳೀಯ ಯುವಕರ ದಿಟ್ಟ ಕಾರ್ಯಚರಣೆ ಮೂಲಕ ಎಲ್ಲರೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ ಐದು ಹುಡುಗರು ಮತ್ತು ಐದು ಹುಡುಗಿಯರು, ಒಟ್ಟೂ 10 ಮಂದಿ ವಿದ್ಯಾರ್ಥಿಗಳು ಹಾಗೂ ಅವರ ಜೊತೆಗಿದ್ದ ಡ್ರೈವರ್ ಸೇರಿ ಹನ್ನೊಂದು ಮಂದಿ ಟ್ರೆಕ್ಕಿಂಗ್‌ಗಾಗಿ ಬಲ್ಲಾಳರಾಯನ ದುರ್ಗಕ್ಕೆ ಆಗಮಿಸಿದ್ದರು. ಪ್ರವೇಶ ಟಿಕೆಟ್ ಪಡೆದ ನಂತರ, ಅವರಿಗೆ ಸರಿಯಾದ ಮಾರ್ಗದ ಮಾಹಿತಿ ಇಲ್ಲದ ಕಾರಣ ಮಂಗಳೂರಿನ ಬಂಡಾಜೆ ಮಾರ್ಗವಾಗಿ ಟ್ರೆಕ್ ಆರಂಭಿಸಿದರು. ಆದರೆ, ಕಾಡಿನ ದುರ್ಗಮ ಪ್ರದೇಶದಲ್ಲಿ ದಾರಿ ತಪ್ಪಿ ಅವರು ಕತ್ತಲಿನಲ್ಲಿ ಕಾಡಿನಲ್ಲೇ ಸುತ್ತಾಡುತ್ತಿದ್ದರು.

ವಿಷಯ ಬೆಳಕಿಗೆ ಬಂದ ತಕ್ಷಣ, ಬಾಳೂರು ಠಾಣೆಯ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿ, ಸ್ಥಳೀಯ ಯುವಕರ ಸಹಾಯದಿಂದ ಸಂಜೆಯಲ್ಲೇ ಹುಡುಕಾಟ ಆರಂಭಿಸಿದರು. ಕಲ್ಲು, ಹುಲ್ಲು, ಮುಳ್ಳುಗಳಿಂದ ಕೂಡಿದ ಕಾಡಿನ ತೀವ್ರ ಪಥಗಳಲ್ಲಿ ಪೊಲೀಸರು ಮತ್ತು ಯುವಕರು ಸತತ 6 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿದರು. ಕೊನೆಗೂ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಎಲ್ಲಾ 11 ಮಂದಿ – 10 ಮಂದಿ ವಿದ್ಯಾರ್ಥಿಗಳು ಮತ್ತು ಡ್ರೈವರ್‌ ಸುರಕ್ಷಿತವಾಗಿ ಪತ್ತೆಯಾದರು.

ಅವರನ್ನು ಗುಡ್ಡದಿಂದ ಕೆಳಕ್ಕೆ ತಂದ ಪೊಲೀಸರು ಅವರಿಗೆ ಊಟ ಒದಗಿಸಿ ವಿಶ್ರಾಂತಿ ನೀಡಿದ ನಂತರ, ಚಿತ್ರದುರ್ಗಕ್ಕೆ ಮರಳಲು ವ್ಯವಸ್ಥೆ ಮಾಡಿದರು. ನಿತ್ರಾಣಗೊಂಡಿದ್ದ ವಿದ್ಯಾರ್ಥಿಗಳು, ತಮ್ಮನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ ಮತ್ತು ಯುವಕರಿಗೆ ಕೃತಜ್ಞತೆ ಸಲ್ಲಿಸಿದರು.