ಕೋಲಾರ(Kolar): ಕಾಂಗ್ರೆಸ್ ಪಕ್ಷದ 20 ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಅವರಲ್ಲಿ 10 ಜನರನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದೇವೆ. ಸದ್ಯದಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್’ನ ಇಬ್ಬರು ಮೂವರು ನಾಯಕರು ಒಟ್ಟಾಗಿ ಕೆಲಸ ಮಾಡಿದರೂ 2023ಕ್ಕೆ ಅಧಿಕಾರಕ್ಕೆ ಬರಲು ಅವರಿಂದ ಸಾಧ್ಯವಾಗುವುದಿಲ್ಲ. ಮುಂದೆಯೂ ಬಿಜೆಪಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.
ರಸ್ತೆ ಹದಗೆಟ್ಟಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು ಡಿ.16ರಂದು ಕರೆ ನೀಡಿರುವ ಕೋಲಾರ ಬಂದ್ ಬಗ್ಗೆ ಪ್ರತಿಕ್ರಿಯಿಸಿ, ರಸ್ತೆಗಳು ಹದಗೆಟ್ಟಿವೆ ಎಂದು ಈಗ ಹೇಳಿದರೆ ಹೇಗೆ? ಮತ ಚಲಾಯಿಸುವಾಗ ಕೆಲಸ ಮಾಡುವಂಥ ಶಾಸಕರನ್ನು ಆಯ್ಕೆ ಮಾಡಬೇಕಿತ್ತು. ಕೆಲಸ ಮಾಡದ ಶಾಸಕರನ್ನು ಆಯ್ಕೆ ಮಾಡಿದರೆ ಹಳ್ಳವೂ ಬೀಳುತ್ತೆ, ಗುಂಡಿಯೂ ಬೀಳುತ್ತೆ. ಮಳೆ ಬಂದರೆ ಇನ್ನೂ ಹಾಳಾಗುತ್ತವೆ ಎಂದು ಹೇಳಿದರು.
ಇನ್ನುಮುಂದಾದರೂ ಜನರು ಕೆಲಸ ಮಾಡುವ ವ್ಯಕ್ತಿಗೆ ಮತ ನೀಡಬೇಕು. ಬಿಜೆಪಿಗೆ ವೋಟು ನೀಡಿದರೆ ರಸ್ತೆ ಅಭಿವೃದ್ಧಿ ಆಗಲಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೇ 17 ಮಂದಿ ಶಾಸಕರು ಬಿಜೆಪಿ ಕಡೆ ಬಂದರು. ಅವರನ್ನು ತಡೆಯುವ ಯೋಗ್ಯತೆ ಇರಲಿಲ್ಲ. ಕಾಂಗ್ರೆಸ್‌ನಿಂದಲೇ ಹೊಸದಾಗಿ 10 ಶಾಸಕರು ಬಿಜೆಪಿಗೆ ಬರಲಿದ್ದಾರೆ. ಈ ಹಿಂದೆ ಬಿಜೆಪಿ ಸೇರ್ಪಡೆಯಾದವರೇ ತಮ್ಮ ಹಳೆ ಸ್ನೇಹಿತರನ್ನು ಕರೆತರಲಿದ್ದಾರೆ ಎಂದರು.