ಬೆಂಗಳೂರು(Bengaluru): ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಲಾ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದ ಮಂಜೂರಾತಿ ಇಲ್ಲವಾದಾಗ, ಅನುದಾನದ ಕೊರತೆ ಎದುರಾದಾಗ ಸ್ಥಳೀಯವಾಗಿ ಸುಗಮ ನಿರ್ವಹಣೆ ಸಾಧ್ಯವಾಗಿಸಲು ಸರ್ಕಾರ ‘ನಮ್ಮ ಶಾಲೆ–ನನ್ನ ಕೊಡುಗೆ ಯೋಜನೆ ರೂಪಿಸಿದೆ.
ಈ ಯೋಜನೆ ಅನ್ವಯ ಸಾರ್ವಜನಿಕರಿಂದ ಆರ್ಥಿಕ ಸಹಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೂ, ಪೋಷಕರಲ್ಲಿ ಶಾಲಾ ಚಟುಚಟಿಕೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವಂತೆ ಮಾಡಲು ಮಕ್ಕಳ ಪೋಷಕರು, ತಂದೆ, ತಾಯಿಯರ ಮನವೊಲಿಸಿ ಪ್ರತಿ ತಿಂಗಳು ಹಣವನ್ನು ಪಡೆಯಬೇಕು. ಹಣಕ್ಕಾಗಿ ಬಲವಂತ ಮಾಡಬಾರದು. ಸಂಗ್ರಹಿಸಿದ ಹಣವನ್ನು ಎಸ್‌ಡಿಎಂಸಿ ಖಾತೆಗೆ ಜಮೆ ಮಾಡಬೇಕು’ ಎಂದು ಸೂಚಿಸಲಾಗಿದೆ.
ಸಂಗ್ರಹಿಸಿದ ಅನುದಾನ ಯಾವಯಾವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಆದ್ಯತಾ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ರಸೀದಿ ನೀಡುವ, ಪ್ರತ್ಯೇಕ ಲೆಕ್ಕಪತ್ರ ಇಡುವ, ಹಣಕಾಸಿನ ನಿರ್ವಹಣೆಯ ಹೊಣೆಗಾರಿಕೆಯನ್ನು ಎಸ್‌ಡಿಎಂಸಿ ಸದಸ್ಯ ಕಾರ್ಯದರ್ಶಿಗೆ ನೀಡಲಾಗಿದೆ.