ಬೆಂಗಳೂರು: ಐಪಿಎಲ್ 2025 ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವದ ಸಂಭ್ರಮ ಅಘಾತದ ನೆನಪಾಗಿ ಬದಲಾಗಿದೆ. ಬೆಂಗಳೂರು ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ನೂಕುನುಗ್ಗಲು, ಕಾಲ್ತುಳಿತದಿಂದ 11 ಜನರು ಸಾವಿಗೀಡಾಗಿದ್ದು, 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಇಂದು ಸಂಜೆ 7.30 ಕ್ಕೆ ಸಿಎಂ ಸಿದ್ದರಾಮಯ್ಯರವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಆರ್ಸಿಬಿ ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ರಾಜ್ಯದ ನಾನಾ ಭಾಗಗಳಿಂದ ಸೇರಿದ್ದರು. ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ ಕಾರ್ಯಕ್ರಮದ ಜೊತೆಗೆ ಚಿನ್ನಸ್ವಾಮಿ ಸ್ಟೇಡಿಯಂ ಎದುರುಗಡೆ ವಿಶೇಷವಾಗಿ ಗೇಟ್ ನಂ.12 ಬಳಿ ಜನಸಾಗರವೇ ಉಕ್ಕಿ ಹರಿದಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಜನಸಂದಣಿ ನೂಕುನುಗ್ಗಲು ಸ್ಥಿತಿಯನ್ನು ಉಂಟುಮಾಡಿತು.
ಕಾಲ್ತುಳಿತದಲ್ಲಿ ಹಲವರು ಜಾರಿ ಬಿದ್ದು, ಓರ್ವ ಯುವಕನ ಕಾಲು ಮುರಿದಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ಪರಿಸ್ಥಿತಿ ತೀವ್ರಗೊಂಡ ಕಾರಣ ಪೊಲೀಸರು ಲಾಠಿಚಾರ್ಜ್ ಕೂಡ ನಡೆಸಿದ್ದಾರೆ. ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಹಾಗೂ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ವಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.














