ಮನೆ ಕಾನೂನು 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ: 44 ವರ್ಷದ ದಾಂಪತ್ಯ ಅಂತ್ಯ

11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ: 44 ವರ್ಷದ ದಾಂಪತ್ಯ ಅಂತ್ಯ

0

ಹರ್ಯಾಣ: ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನಲ್ಲಿ 3.07 ಕೋಟಿ ರೂಪಾಯಿ ಮೊತ್ತದ ಜೀವನಾಂಶ ಮೊತ್ತದ ಪ್ರಕರಣ ಇತ್ಯರ್ಥಗೊಂಡ ನಂತರ ಹರ್ಯಾಣದ ಕರ್ನಲ್‌ ದಂಪತಿ ತಮ್ಮ 44 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಘಟನೆ ನಡೆದಿದೆ.

Join Our Whatsapp Group

70 ವರ್ಷದ ಪತಿ, ಪತ್ನಿಗೆ ಜೀವನಾಂಶ ನೀಡಲು ತನ್ನ ಕೃಷಿ ಭೂಮಿಯನ್ನು ಮಾರಾಟ ಮಾಡಿರುವುದಾಗಿ ವರದಿ ತಿಳಿಸಿದೆ. 1980ರಲ್ಲಿ ಇವರು ವಿವಾಹವಾಗಿದ್ದು, ಮೂರು ಮಕ್ಕಳಿದ್ದಾರೆ. 2006ರಲ್ಲಿ ದಂಪತಿ ಪ್ರತ್ಯೇಕಗೊಂಡಿದ್ದರು.

ಮಾನಸಿಕ ಕಿರುಕುಳದಿಂದ ಬೇಸತ್ತು ಪತಿ ವಿಚ್ಛೇದನದ ಮೊರೆ ಹೋಗಿದ್ದರು. ಆದರೆ ಕರ್ನಲ್‌ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸುಮಾರು 11 ವರ್ಷಗಳ ಕಾಲ ಹೈಕೋರ್ಟ್‌ ನಲ್ಲಿ ಕಾನೂನು ಸಮರ ನಡೆದ ನಂತರ 2023ರ ನವೆಂಬರ್‌ ನಲ್ಲಿ ಮಾತುಕತೆ ಮೂಲಕ ನಿರ್ಧಾರಕ್ಕೆ ಬರುವಂತೆ ಕೋರ್ಟ್‌ ಶಿಫಾರಸು ಮಾಡಿತ್ತು. ಅದರಂತೆ ದಂಪತಿ ಹಾಗೂ ಮಕ್ಕಳು ವಿಚ್ಛೇದನಕ್ಕೆ ಸಹಮತ ಸೂಚಿಸಿದ್ದರು. ಅಲ್ಲದೇ ಜೀವನಾಂಶ ಪಾವತಿಸಲು ಪತಿ ಒಪ್ಪಿಗೆ ನೀಡಿದ್ದರು ಎಂದು ವರದಿ ವಿವರಿಸಿದೆ.

ಪತಿ ಜೀವನಾಂಶ ಮೊತ್ತವನ್ನು ವಿವಿಧ ರೂಪದಲ್ಲಿ ಸಂದಾಯ ಮಾಡಿದ್ದರು. 2.16 ಕೋಟಿ ರೂ. ಮೊತ್ತ ಡಿಡಿ ಮೂಲಕ, ಬೆಳೆ ಮಾರಾಟದಿಂದ ಬಂದ 50 ಲಕ್ಷ ರೂ. ನಗದು ಹಾಗೂ ಬೆಳ್ಳಿ, ಚಿನ್ನದ ಆಭರಣಗಳ ಮೂಲಕ 40 ಲಕ್ಷ ರೂ. ಪತ್ನಿಗೆ ಪಾವತಿಸಿದ್ದರು.

ಒಪ್ಪಂದದ ಪ್ರಕಾರ, ಮೊದಲ ಪಾರ್ಟಿ (ಪತಿ), ಎರಡನೇ ಪಾರ್ಟಿ(ಪತ್ನಿ)ಗೆ 3.07 ಕೋಟಿ ರೂ. ಪಾವತಿಸಿದ್ದಾರೆ. ಇದು ಶಾಶ್ವತ ಜೀವನಾಂಶವಾಗಿದೆ. ಅಲ್ಲದೇ ಮೊದಲ ಪಾರ್ಟಿ ಅಥವಾ ಅವರ ಉತ್ತರಾಧಿಕಾರಿ ಕುರಿತು ಪತ್ನಿ ಮತ್ತು ಮಕ್ಕಳು ಯಾವುದೇ ಹಕ್ಕನ್ನು ಹೊಂದಿಲ್ಲ.

ನವೆಂಬರ್‌ 22ರಂದು ಹೈಕೋರ್ಟ್‌ ದಂಪತಿಯ ವಿಚ್ಛೇದನ ಪ್ರಕರಣವನ್ನು ಅಂತಿಮಗೊಳಿಸಿ ತೀರ್ಪು ನೀಡಿತ್ತು. ದೀರ್ಘ ಕಾನೂನು ಹೋರಾಟ, ಒಮ್ಮತದ ನಿರ್ಧಾರದೊಂದಿಗೆ 44 ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿದೆ.