ಮನೆ ಸುದ್ದಿ ಜಾಲ ರಾಜ್ಯದಲ್ಲಿ ನೇರ ಪಾವತಿ ಪಡೆಯುತ್ತಿರುವ 11,133 ಪೌರ ಕಾರ್ಮಿಕರ ಖಾಯಂ ಮಾಡಲಾಗುತ್ತಿದೆ: ಎಂ.ಕೋಟೆ ಶಿವಣ್ಣ

ರಾಜ್ಯದಲ್ಲಿ ನೇರ ಪಾವತಿ ಪಡೆಯುತ್ತಿರುವ 11,133 ಪೌರ ಕಾರ್ಮಿಕರ ಖಾಯಂ ಮಾಡಲಾಗುತ್ತಿದೆ: ಎಂ.ಕೋಟೆ ಶಿವಣ್ಣ

0

ಮೈಸೂರು: ಮೊದಲ‌ ಹಂತದಲ್ಲಿ ರಾಜ್ಯದಲ್ಲಿ ನೇರ ಪಾವತಿ ಅಡಿ ಕೆಲಸ ಮಾಡುತ್ತಿರುವ 11,113 ಪೌರ ಕಾರ್ಮಿಕರನ್ನು ಕಾಯಂ ಮಾಡಲಾಗುತ್ತಿದ್ದು , 2 ನೇ ಹಂತದಲ್ಲಿ 12,867 ಪೌರ ಕಾರ್ಮಿಕರನ್ನು ಖಾಯಂ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಕೋಟೆ ಶಿವಣ್ಣ ಮಾತನಾಡಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯ ನಂತರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

2 ನೇ ಹಂತದ ಪೌರ ಕಾರ್ಮಿಕರ ಖಾಯಂ ಮಾಡಲು ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆಯಲಾಗಿದೆ. ಇದು ಒಂದು ಐತಿಹಾಸಿಕ ನಿರ್ಧಾರವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಪೌರ ಕಾರ್ಮಿಕರ ಖಾಯಂಗೆ ಎಷ್ಟೆ ಅನುದಾನ ಅಗತ್ಯವಿದ್ದರೂ ಒದಗಿಸುವುದಾಗಿ ತಿಳಿಸಿರುತ್ತಾರೆ ಎಂದರು.

ಹೊರಗುತ್ತಿಗೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಗುತ್ತಿಗೆ ಆದಾರವನ್ನು ತೆಗೆದು ನೇರಪಾವತಿಯ ಯೋಜನೆಯಡಿಗೆ ತರುವ ಉದ್ದೇಶ ಹೊಂದಲಾಗಿದೆ. ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯದಲ್ಲಿರುವ ಪೌರ ಕಾರ್ಮಿಕರಿಗೆ ನೇರಪಾವತಿ ಮಾಡುವ ಸಂಬಂಧ ಹಾಗೂ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ನಾನು ಸಹ ಇದ್ದು ಈಗಾಗಲೇ 3 ವರದಿಗಳನ್ನು ನೀಡಲಾಗಿದೆ. ಪೌರ ಕಾರ್ಮಿಕರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಪ್ರತಿ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಡೀ ರಾಜ್ಯದಲ್ಲಿ ವಿವಿಧ ಇಲಾಖೆಗಳು, ಬಸ್ ಸ್ಟಾಂಡ್‌ ಗಳು ಹಾಗೂ ಖಾಸಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸರ್ವೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸರ್ವೆ ಮಾಲಾಗುತ್ತಿದೆ. ರಾಜ್ಯದಲ್ಲಿ ಪೌರ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಹಿಂದೆ ಉಳಿದಿದ್ದು, ಇವರ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಎಸ್.ಎಸ್.ಎಲ್.ಸಿ ಯಿಂದ ಪದವಿ ಶಿಕ್ಷಣದವರೆಗೆ ಉತ್ತಮ ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳಿಗೆ ಪ್ರತಿ ಜಿಲ್ಲೆಯಲ್ಲಿ ಸನ್ಮಾನ ಮಾಡಲಾಗಿದೆ ಎಂದರು.

ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಅಗತ್ಯ ಜಾಗಗಳನ್ನು ಗುರುತಿಸಲಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ನನ್ನನ್ನು ಒಳಗೊಂಡoತೆ ಗುಜರಾತ್‌ಗೆ 15 ಜನರ ತಂಡ ಬೇಟಿ ನೀಡಿ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಪೌರ ಕಾರ್ಮಿಕರನ್ನು ಒಳಗೊಂಡoತೆ ಅಧ್ಯಯನ ನಡೆಸಲು ಸಿಂಗಾಪುರಕ್ಕೆ ಭೇಟಿ ನೀಡಲಾಗಿತ್ತು. ಪೌರ ಕಾರ್ಮಿಕರಿಗೆ ಸ್ವಚ್ಚತಾ ಪರಿಕರಗಳನ್ನು ನೀಡಲಾಗುತ್ತಿದೆ ಆದರೆ ಇದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಪೌರ ಕಾರ್ಮಿಕರಿಗೆ ಕಂಪರ್ಟ್ ಆಗಿರುವ ಪ್ರದೇಶವಾರು ಸ್ವಚ್ಚತಾ ಪರಿಕರಗಳನ್ನು ನೀಡಲು ಎಕ್ಸ್ಪರ್ಟ್ ಕಮಿಟಿಯಿಂದ ವರದಿ ಪಡೆದು ಪರಿಕರಗಳ ತಯಾರಿಕೆಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

2000 ನೇ ಇಸವಿಯಲ್ಲಿಯೇ ಮ್ಯಾನುಯಲ್ ಸ್ಕ್ಯಾವೆಂಜರ್ ನಿಷೇದ ಕಾಯ್ದೆ ಜಾರಿಗೆ ಬಂದಿದ್ದರೂ, ರಾಜ್ಯದಲ್ಲಿ ಇನ್ನೂ 7070 ಮ್ಯಾನುಯಲ್ ಸ್ಕ್ಯಾವೆಂಜರ್ಗಳು ಇದ್ದಾರೆ. ಇವರಲ್ಲಿ 2000 ಮ್ಯಾನುಯಲ್ ಸ್ಕ್ಯಾವೆಂಜರ್ಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಉಳಿದವರ ಸರ್ವೇ ಮಾಡಿ ಪನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಿಂದೆ ಪೌರ ಕಾರ್ಮಿಕರಿಗೆ ತಿಂಡಿ ವ್ಯವಸ್ಥೆಗೆ ತಲಾ 20 ರೂ ನೀಡಲಾಗುತ್ತಿತ್ತು ಇದನ್ನೂ 35 ರೂ ಗಳಿಗೆ ಹೆಚ್ಚಿಸಲಾಗಿದೆ. ಪೌರಕಾರ್ಮಿಕರ ಮಕ್ಕಳಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹಾಗೂ ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ. ಆಯೋಗದಲ್ಲಿ 350 ಪ್ರಕರಣಗಳಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳಾದ ಕೆ.ವಿ.ರಾಜೇಂದ್ರ ಮಾತನಾಡಿ, ಪೌರ ಕಾರ್ಮಿಕರ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ದೊರೆಯದೆ ಇದ್ದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು. ಪೌರಕಾರ್ಮಿಕರಿಗೆ ಸಕಾಲದಲ್ಲಿ ಸಂಬoಳ ಹಾಗೂ ಇ.ಎಪ್ ಮತ್ತು ಪಿ.ಎಪ್ ಗಳನ್ನು ಪಾವತಿ ಮಾಡಬೇಕು. ಪೌರ ಕಾರ್ಮಿಕರಿಗೆ ಎಲ್ಲಾ ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ವಿಶ್ರಾಂತಿಗೃಹಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಚೀಟಿಗಳನ್ನು ನೀಡಬೇಕು. ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ಗಳನ್ನು ನೀಡುವ ವ್ಯವಸ್ಥೆ ಮಾಡಬೇಕು. ಅಂಬೇಡ್ಕರ್ ಭವನ, ಬಾಬು ಜಗನ್‌ಜೀವನ್ ರಾಮ್ ಭವನಗಳಲ್ಲಿ ಪೌರ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಸಮಾರಂಭಗಳನ್ನು ಮಾಡಲು ಸಮುದಾಯ ಭವನಗಳನ್ನು ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಪುರಸಭೆ ನಗರಸಭೆಗಳಿಗೆ ಬೇಟಿ ನೀಡಿ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪೌರ ಕಾರ್ಮಿಕರಿಗೆ ನೀಡಿರುವ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ನಿಗದಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಈ ಸಂಬoಧ ಪ್ರತಿಷ್ಠಿತ ಆಸ್ಪತ್ರೆಗಳನ್ನು ಟೈ ಅಪ್ ಮಾಡಿಕೊಳ್ಳಲಾಗಿದೆ. 158 ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಆಯ್ಕೆ ಮಾಡಿದ್ದು, ಇವರಲ್ಲಿ 60 ಜನರಿಗೆ ಸ್ವತಃ ನಿವೇಶನ ಇಲ್ಲ. ಇವರನ್ನು ಆಶ್ರಯ ಮನೆ ಯೋಜನೆಯಡಿ ಪರಿಗಣಿಸಲಾಗುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಇದ್ದ 205 ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದು, ಇದರಲ್ಲಿ 170 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾದ್ದು, ಆಕ್ಷೇಪಣೆಗಳನ್ನು ಅಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಸೇರಿದಂತೆ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.