ಮನೆ ಸುದ್ದಿ ಜಾಲ ಅಂಬರ್‌ನಾಥ್‌ನಲ್ಲಿ ಬಿಜೆಪಿಗೆ ಬೆಂಬಲಿಸಿದ ಕಾಂಗ್ರೆಸ್​ನ 12 ಸದಸ್ಯರ ಅಮಾನತು

ಅಂಬರ್‌ನಾಥ್‌ನಲ್ಲಿ ಬಿಜೆಪಿಗೆ ಬೆಂಬಲಿಸಿದ ಕಾಂಗ್ರೆಸ್​ನ 12 ಸದಸ್ಯರ ಅಮಾನತು

0

ನವದೆಹಲಿ : ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಕಾಂಗ್ರೆಸ್ ಪಕ್ಷ ಇಂದು ಅಂಬರ್‌ನಾಥ್‌ನಲ್ಲಿ ತನ್ನ ಪಕ್ಷದ ಸ್ಥಳೀಯ ನಾಯಕರನ್ನು ಅಮಾನತುಗೊಳಿಸಿದೆ. ಮಹಾರಾಷ್ಟ್ರದಲ್ಲಿ ಚುನಾವಣೋತ್ತರ ಮೈತ್ರಿಗಳ ಕುರಿತು ವ್ಯಾಪಕ ರಾಜಕೀಯ ವಿವಾದದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಠಿಣ ಕ್ರಮ ಕೈಗೊಂಡಿದೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು ಅಂಬರ್‌ನಾಥ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದು, ರಾಜ್ಯ ನಾಯಕರ ಅರಿವಿಗೆ ಬಾರದೆ ಅಥವಾ ಅನುಮೋದನೆಯಿಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ 12 ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ತನ್ನದೇ ಆದ ಚಿಹ್ನೆಯ ಮೇಲೆ ನಾಗರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಅಂಬರ್​ನಾಥ್ ಪುರಸಭೆಯಲ್ಲಿ 12 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಪತ್ರದಲ್ಲಿ ಗಣೇಶ್ ಪಾಟೀಲ್ ಹೇಳಿದ್ದಾರೆ. ಆದರೆ ಬಿಜೆಪಿಯೊಂದಿಗೆ ಕೈಜೋಡಿಸುವ ನಿರ್ಧಾರವು ಮಾಧ್ಯಮ ವರದಿಗಳ ಮೂಲಕವೇ ಗೊತ್ತಾಯಿತು.

ಹೀಗಾಗಿ, ತಮ್ಮ ಗಮನಕ್ಕೆ ಬಾರದೆ ಈ ಮೈತ್ರಿ ಮಾಡಿಕೊಂಡಿದ್ದರಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. “ನಾವು ಕಾಂಗ್ರೆಸ್ ಗುರುತಿನ ಮೇಲೆ ಚುನಾವಣೆಗಳನ್ನು ಎದುರಿಸಿದ್ದೇವೆ ಮತ್ತು 12 ಸ್ಥಾನಗಳನ್ನು ಗೆದ್ದಿದ್ದೇವೆ. ಆದರೆ, ರಾಜ್ಯ ನಾಯಕತ್ವ ಅಥವಾ ರಾಜ್ಯ ಕಚೇರಿಗೆ ತಿಳಿಸದೆ ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ. ಇದು ಒಳ್ಳೆಯದಲ್ಲ. ಹೀಗಾಗಿ ರಾಜ್ಯ ಅಧ್ಯಕ್ಷರ ಸೂಚನೆಯಂತೆ ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ನಾಥ್ ಮತ್ತು ಅಕೋಲಾ ಜಿಲ್ಲೆಯ ಅಕೋಟ್ ಎಂಬ 2 ಪುರಸಭೆಗಳಲ್ಲಿ ಪ್ರತಿಸ್ಪರ್ಧಿ ಪಕ್ಷಗಳೊಂದಿಗೆ ಬಿಜೆಪಿ ಚುನಾವಣಾ ನಂತರದ ಮೈತ್ರಿ ಮಾಡಿಕೊಂಡ ವಿವಾದದ ಮಧ್ಯೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅಂಬರ್​​ನಾಥ್‌ನಲ್ಲಿ ಬಿಜೆಪಿ ‘ಅಂಬರ್​ನಾಥ್ ವಿಕಾಸ್ ಅಘಾಡಿ’ ಬ್ಯಾನರ್ ಅಡಿಯಲ್ಲಿ ಕಾಂಗ್ರೆಸ್ ಮತ್ತು ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ನಾಗರಿಕ ಸಂಸ್ಥೆಯ ನಾಯಕತ್ವವನ್ನು ರಚಿಸಿತು. ಮಿತ್ರಪಕ್ಷ ಶಿವಸೇನೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅದನ್ನು ಬದಿಗಿಟ್ಟಿತು. ಈ ಬೆಳವಣಿಗೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಹ ಮೈತ್ರಿಗಳಲ್ಲಿ ಭಾಗಿಯಾಗಿರುವ ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದರು.