ಮನೆ ಆರೋಗ್ಯ ಸಿಹಿ ಹಣ್ಣೆಂದು ವಿಷಪೂರಿತ ಕಾಯಿ ಸೇವಿಸಿ ಮಕ್ಕಳು ಸೇರಿ 12 ಮಂದಿ ಅಸ್ವಸ್ಥ

ಸಿಹಿ ಹಣ್ಣೆಂದು ವಿಷಪೂರಿತ ಕಾಯಿ ಸೇವಿಸಿ ಮಕ್ಕಳು ಸೇರಿ 12 ಮಂದಿ ಅಸ್ವಸ್ಥ

0

ಚಾಮರಾಜನಗರ: ವಿಷಪೂರಿತ ಕಾಯಿ ತಿಂದು ವಾಂತಿ, ಭೇದಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ 12 ಮಂದಿ ಕೂಲಿ ಕಾರ್ಮಿಕರು ಬುಧವಾರ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Join Our Whatsapp Group

ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡ ಗ್ರಾಮದ ಯುವರಾಜು(4), ವೆಂಕಟೇಶ್ (8), ಪ್ರೀತಮ್ (10), ಪವನ್ (10), ಅನುಷಾ, (10) ಅಂಕಿತಾ (10), ಅರ್ಜುನ(10), ಬದ್ರಿಬಾಯಿ (32), ಸೀತಾಬಾಯಿ (48) , ಲಕ್ಷ್ಮೀ (35) ಸರಸ್ವತಿ (42), ಲಲಿತಾ(45) ಆಸ್ಪತ್ರೆಗೆ ದಾಖಲಾಗಿರುವ ಕಾರ್ಮಿಕರು.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ಸಮೀಪ ಕಬ್ಬು ಕಟಾವಿಗೆ ಒಂದು ತಿಂಗಳ ಹಿಂದೆ ಆಗಮಿಸಿದ್ದ ಮೂರು ಕುಟುಂಬ, ಎಂದಿನಂತೆ ಬುಧವಾರ ಕಟಾವು ಮಾಡಲು ತೆರಳಿದ್ದರು. ಈ ವೇಳೆ ಪಕ್ಕದಲ್ಲಿ ಆಟವಾಡುತ್ತಿದ್ದ ಅನುಷಾ ಎಂಬ ಬಾಲಕಿ ಮರಳ ಕಾಯಿ ತಿಂದು ಸಿಹಿಯಾಗಿದೆ ಎಂದಿದ್ದು, ಜೊತೆಯಲ್ಲಿದ್ದವರೂ ಕಾಯಿಯ ಒಳಗಡೆಯ ಬೀಜ ತಿಂದಿದ್ದಾರೆ. ಮಕ್ಕಳು ಸಿಹಿ ಕಾಯಿ ಅನ್ನುತ್ತಿದ್ದಂತೆ ಪೋಷಕರೂ ಸಹ ಕಾಯಿ ಮತ್ತು ಬೀಜ ಸೇವಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಸೇರಿ ಹಲವರಿಗೆ ವಾಂತಿ, ಭೇದಿಯಾಗಿದೆ. ತಕ್ಷಣ ಆಟೋ ರಿಕ್ಷಾ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಜೊತೆಯಲ್ಲಿದ್ದ ಕೂಲಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಶೃತಿ, ಡಾ.ಸೌಮ್ಯ, ಡಾ.ವೈಭವ್ ಇತರರು ಸಕಾಲದಲ್ಲಿ ಚಿಕಿತ್ಸೆ ನೀಡಿದ್ದಾರೆ. ಅಸ್ವಸ್ಥರ ಪೈಕಿ ಯುವರಾಜ್ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ನಗರಕ್ಕೆ ಕಳುಹಿಸಲಾಗಿದೆ.

ಗ್ರಾಮಾಂತರ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಅಸ್ವಸ್ಥರು ಹಾಗು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.