ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದ ದೊಡ್ಡ ಕಳ್ಳತನದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬ್ಯಾಂಕ್ ಎದುರು ನಿಲ್ಲಿಸಿದ್ದ ಸ್ಕೂಟರ್‌ನ ಡಿಕ್ಕಿಯನ್ನು ಮುರಿದು ಖದೀಮರು 13 ಲಕ್ಷ ರೂಪಾಯಿ ನಗದು ದೋಚಿದ ಭೀಕರ ಘಟನೆ ಬೆಳಕಿಗೆ ಬಂದಿದೆ.
ಸಕಲೇಶಪುರ ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆ ಎದುರು ನಡೆದಿದೆ. ಮೂಲ ಮಾಹಿತಿಯಂತೆ, ಯೋಗೇಶ್ ಎಂಬ ವ್ಯಕ್ತಿ ಬ್ಯಾಂಕ್‌ನಲ್ಲಿ ಇನ್ನೂ ಅಗತ್ಯವಿದ್ದ 2.5 ಲಕ್ಷ ರೂ. ನಗದನ್ನು ಡ್ರಾ ಮಾಡಲು ಬಂದಿದ್ದರು. ಅವರು ತಮ್ಮ ಬಳಿ ಇದ್ದ 13 ಲಕ್ಷ ರೂಪಾಯಿ ಹಣವನ್ನು ತಮ್ಮ ಸ್ಕೂಟರ್‌ನ ಡಿಕ್ಕಿಯಲ್ಲಿ ಇಟ್ಟು, ಲಾಕ್ ಮಾಡಿ ಬ್ಯಾಂಕ್ ಒಳಗೆ ತೆರಳಿದ್ದರು. ಯೋಗೇಶ್ ಬ್ಯಾಂಕ್ ಒಳಗೆ ಕೆಲಸ ಪೂರೈಸಿ ಹೊರ ಬರುವಷ್ಟರಲ್ಲಿ, ಸ್ಕೂಟರ್‌ನ ಡಿಕ್ಕಿಯನ್ನು ಯಾರೋ ಖದೀಮರು ಮುರಿದು ಒಳಗೆ ಇರಿಸಿದ್ದ 13 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಘಟನೆ ಆಘಾತ ನೀಡುವಂತಹದ್ದಾಗಿದ್ದು, ಕೆಲವೇ ನಿಮಿಷಗಳಲ್ಲಿ ನಡೆದಿರುವ ಈ ಕೃತ್ಯ ಸ್ಥಳೀಯ ನಾಗರಿಕರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ.
ಯೋಗೇಶ್ ಕೂಡಲೇ ಸಕಲೇಶಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆ ಸ್ಥಳಕ್ಕೆ ತಕ್ಷಣವೇ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯ ಆರಂಭವಾಗಿದೆ. ಕಳ್ಳರನ್ನು ಹಿಡಿಯಲು ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.














