ಬೆಂಗಳೂರು: ಪ್ರಶಾಂತ್ ಸೇರಿದಂತೆ ಎಲ್ಲ ಆರೋಪಿಗಳನ್ನು14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಲೋಕಾಯುಕ್ತ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಬೆಳಿಗ್ಗೆ ಪ್ರಶಾಂತ್ ಸೇರಿದಂತೆ ಎಲ್ಲ ಆರೋಪಿಗಳನ್ನುಹಾಜರುಪಡಿಸಿದರು.
ವಿರೂಪಾಕ್ಷಪ್ಪ ಮಾಡಾಳ್ ವಿಚಾರಣೆ ಕುರಿತು ಪೊಲೀಸರು ನಿರ್ಧರಿಸುತ್ತಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್ ಅಂತಿಮಗೊಳಿಸಲು ಲಂಚ ಪಡೆದ ಪ್ರಕರಣದಲ್ಲಿ ಕಾರ್ಖಾನೆಯ ಅಧ್ಯಕ್ಷರಾಗಿರುವ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ವಿಚಾರಣೆ ನಡೆಸುವ ಕುರಿತು ತನಿಖಾ ತಂಡದಲ್ಲಿರುವ ಪೊಲೀಸ್ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್’ಡಿಎಲ್ ಟೆಂಡರ್’ಗೆ ಸಂಬಂಧಿಸಿದ ಕಾರ್ಯಾದೇಶ ನೀಡಲು ₹ 40 ಲಕ್ಷ ಲಂಚ ಪಡೆಯುತ್ತಿದ್ದ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ. ಅವರೊಂದಿಗೆ ಲಂಚದ ಹಣ ನೀಡಲು ಬಂದಿದ್ದ ಇತರ ಮೂವರು ಹಾಗೂ ಪ್ರಶಾಂತ್ ಕಚೇರಿಯ ಅಕೌಂಟೆಂಟ್ ಅವರನ್ನೂ ಬಂಧಿಸಲಾಗಿದೆ ಎಂದರು.
ಪ್ರಶಾಂತ್ ಅವರನ್ನು ಬಂಧಿಸಿದ್ದ ಖಾಸಗಿ ಕಚೇರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ₹ 40 ಲಕ್ಷ ಲಂಚದ ಹಣ ಹಾಗೂ ಇತರ ₹ 1.62 ಕೋಟಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಶಾಂತ್ ಮನೆಯಲಿ ₹ 6.10 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೆಎಸ್’ಡಿಎಲ್ ಅಧ್ಯಕ್ಷರಾದ ಶಾಸಕ ವಿರೂಪಾಕ್ಷಪ್ಪ ಅವರ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆಯೂ ಪೊಲೀಸರೇ ನಿರ್ಧರಿಸಲಿದ್ದಾರೆ ಎಂದರು.