ಮನೆ ರಾಜ್ಯ ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ 15 ಸೇತುವೆ ಮುಳುಗಡೆ

ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ 15 ಸೇತುವೆ ಮುಳುಗಡೆ

0

ಬೆಳಗಾವಿ: ಹಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲಾದ್ಯಂತ ಹಳ್ಳ-ಕೊಳ್ಳಗಳು ತುಂಬಿ ಹರಿದಿತ್ತು. ಪರಿಣಾಮ ಜಿಲ್ಲೆ 15 ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ಇದು ಜನಜೀವನದ ಮೇಲೆ ಪರಿಣಾಮ ಬೀರಿದೆ.

Join Our Whatsapp Group

ಭಾರೀ ಮಳೆಯ ಪರಿಣಾಮ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಗೋಕಾಕ, ಹುಕ್ಕೇರಿ, ಖಾನಾಪುರ ತಾಲೂಕಿನಲ್ಲಿ 15 ಸೇತುವೆಗಳು ಮುಳುಗಡೆಯಾಗಿವೆ. ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸೇತುವೆಗಳ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪೊಲೀಸ್ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.

ಭೋಜ-ಕಾರದಗಾ, ಭೋಜವಾಡಿ-ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರವಾಡ-ಕುನ್ನೂರು, ಸಿದ್ನಾಳ್-ಅಕ್ಕೋಲ್, ಭೋಜ-ಕುನ್ನೂರು, ಭಿವಶಿ-ಜತ್ರತ್, ಜತ್ರತ್-ಭಿವಾಸಿ, ಮಂಜರಿ- ಬವನಸೌಂದತ್ತಿ, ಮಂಗಾವತಿ-ರಾಜಾಪುರ, ಅರ್ಜುನವಾಡಿ-ಕೊಚೇರಿ, ಅರ್ಜುನವಾಡಿ-ಕುರ್ಣಿ, ಕುರಣಿ-ಕೊಚಾರಿ, ಶೆಟ್ಟಿಹಳ್ಳಿ-ಮಾರನಹೋಲ್, ಖಾನಾಪುರ-ಹೆಮ್ಮಡಗಾ ಸೇತುವೆಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಸಂಚಾರವನ್ನು ಪರ್ಯಾಯ ರಸ್ತೆಗಳಲ್ಲಿ ಬದಲಾಯಿಸಲಾಗಿದೆ.

ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಒಳಹರಿವು ಹೆಚ್ಚಿದೆ.

ಜುಲೈ 22ರ ವೇಳೆಗೆ ಘಟಪ್ರಭಾ (ಹಿಡಕಲ್)ದ ಒಳಹರಿವು 25,765 ಕ್ಯೂಸೆಕ್, ಮಾರ್ಕಂಡೇಯ (ಶಿರೂರು ಅಣೆಕಟ್ಟು) 1454 ಕ್ಯೂಸೆಕ್, ಹಿಪ್ಪರಗಿ 91,200, ಮಲಪ್ರಭಾ 11,930, ಆಲಮಟ್ಟಿ 83,940, ರಾಜಾಪುರ, 72 ಕ್ಯುಸೆಕ್’ಗೆ ತಲುಪಿದೆ.

ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ನಿಟ್ಟುಸಿರು ಬಿಡುವಂತಾಗಿದೆ. ಉತ್ತಮ ಮಳೆಯಿಂದ ಒಣಗುತ್ತಿದ್ದ ಭತ್ತದ ಬೆಳೆಗಳು ಪಾರಾಗಿ ರೈತರಲ್ಲಿ ಸಂತಸ ಮೂಡಿಸಿದೆ.

ಆದರೆ, ಬೆಳಗಾವಿ ನಗರದ ಹೊರವಲಯದ ಬಳ್ಳಾರಿ ನಾಲಾ ಹಾಗೂ ಮಾರ್ಕಂಡೇಯ ನದಿ ತೀರದಲ್ಲಿ ಭತ್ತ ಬಿತ್ತಿದ್ದ ಕೆಲ ರೈತರು ಬೆಳೆಗಳು ಮುಳುಗಡೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.