ಬೆಂಗಳೂರು: ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯ, ಮುಖ್ಯವಾಗಿ ಮುಸ್ಲಿಂ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡುವ ಕುರಿತು ನಡೆದ ತೀರ್ಮಾನ ಹೊಸದಾಗಿಲ್ಲ. ಇದು 2019ರ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ರಚನೆಯಾದ ಸಂಪುಟ ಉಪಸಮಿತಿ ಶಿಫಾರಸಿನ ಆಧಾರದ ಮೇಲಿನ ನಿರ್ಧಾರ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಸಚಿವರು ಸ್ಪಷ್ಟಪಡಿಸಿದಂತೆ, “ಸಾಚಾರ್ ಸಮಿತಿ ವರದಿ” ಪ್ರಕಾರ ಈಗಾಗಲೇ ಕೇಂದ್ರ ಸರ್ಕಾರವು ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ ನೀಡುತ್ತಿದೆ. ರಾಜ್ಯದಲ್ಲಿಯೂ ಇದೇ ಮಾದರಿಯನ್ನು ಅನುಸರಿಸುವ ಬೇಡಿಕೆ ಅನೇಕ ವರ್ಷಗಳಿಂದ ಇದ್ದದ್ದಾಗಿದೆ. 2021ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಸಹ ಇದೇ ಶಿಫಾರಸು ಮಾಡಿದ್ದು, ಅದನ್ನು ಅನುಸರಿಸಿ ರಾಜ್ಯ ಸಂಪುಟ ಈ ತೀರ್ಮಾನಕ್ಕೆ ಸಮ್ಮತಿಯನ್ನು ನೀಡಿದೆ.
ಬಡ ಕುಟುಂಬಗಳಿಗೆ ನೆರವಿನ ಅಗತ್ಯವಿದೆ ಎಂದು ಸಚಿವರು ಒತ್ತಾಯಿಸಿದರು. ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಡ ಕುಟುಂಬಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಅವರಲ್ಲಿ ಬಹುತೆಕಿಗೂ ಸ್ವಂತ ಮನೆ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ವಾಸ್ತವಾಧಾರಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ವಿರೋಧಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಜಮೀರ್, “ವಾಸ್ತವಾಂಶಗಳನ್ನು ಅರಿಯದೇ ರಾಜಕೀಯ ಟೀಕೆ ಮಾಡುತ್ತಿರುವುದು ಅಸಂಭದ್ಧ. ಈ ಯೋಜನೆ ಯಾವುದೇ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ. ಶೇ.90ರಷ್ಟು ಮನೆಗಳನ್ನು ಈಗಾಗಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ನೀಡಲಾಗಿದೆ. ಉಳಿದ ಶೇ.10–15ನ್ನು ಮಾತ್ರ ಬಡ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ,” ಎಂದು ಹೇಳಿದರು.














