ಮೈಸೂರು(Mysuru): ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ 17 ಮಂದಿ ಶಾಸಕರು ಮತ್ತೆ ಬಿಜೆಪಿ ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರ್ಪಡೆ ಆಗಲ್ಲ ಎಂದು ಸಚಿವ ಕೆ.ಸಿ .ನಾರಾಯಣ ಗೌಡ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷ ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿದೆ. ನಮಗೆಲ್ಲ ಸಚಿವ ಸ್ಥಾನ ಕೊಟ್ಟು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ. ಗುಜರಾತ್’ನಂತೆ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ., ಹಿಮಾಚಲ ಪ್ರದೇಶದಲ್ಲಿ ಕೆಲವೊಂದು ಸ್ಥಳೀಯ ಕಾರಣಗಳಿಂದ ಬಿಜೆಪಿಗೆ ಸೋಲಾಗಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಈಗಾಗಲೇ ಶ್ರೀರಂಗಪಟ್ಟಣದ ಸಚ್ಚಿದಾನಂದ ಬಿಜೆಪಿ ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮಂಡ್ಯ ಜಿಲ್ಲೆಯ ನಾಯಕರುಗಳು ಬಿಜೆಪಿಗೆ ಸೇರಲಿದ್ದಾರೆ, ಯಾವ್ಯಾವ ನಾಯಕರುಗಳು ಸೇರುತ್ತಾರೆ ಎಂಬುದನ್ನು ಈಗಲೇ ಹೇಳುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ರೌಡಿ ಶೀಟರ್’ಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗೂಂಡಾಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಕಾಂಗ್ರೆಸ್’ನಲ್ಲಿ ಎಷ್ಟು ಜನ ಗೂಂಡಾಗಳು ಇಲ್ಲಾ, ಅವರೇ ಟ್ರೈನಿಂಗ್ ಕೊಟ್ಟಿದ್ದು ಎಂದು ಆರೋಪಿಸಿದರು.
ಕಾಂಗ್ರೆಸ್ನವರು ಗೂಂಡಾಗಳು ಎಂದು ಕರೆಯುವವರು ಮೊದಲು ಕಾಂಗ್ರೆಸ್’ನಲ್ಲೆ ಇದ್ದರು. ಈಗ ಬಿಜೆಪಿ ಸೇರ್ಪಡೆ ಆಗಲು ಮುಂದಾಗಿದ್ದರಿಂದ ಅವರನ್ನು ಗೂಂಡಾಗಳೆಂದು ಕಾಂಗ್ರೆಸ್ ಕರೆಯುತ್ತಿದೆ. ವಿದ್ಯಾವಂತರು, ತ್ಯಾಗಿಗಳು, ಆರ್’ಎಸ್’ಎಸ್ ಹಿನ್ನೆಲೆ ಉಳ್ಳವರು ಬಿಜೆಪಿಯಲ್ಲಿ ಇದ್ದಾರೆ ಹೊರತು ಕೈಯಲ್ಲಿ ಮಚ್ಚು ಹಿಡಿಯುವವರು ಬಿಜೆಪಿಯಲ್ಲಿ ಇಲ್ಲ ಅವರು ಯಾವ ಪಕ್ಷದಲ್ಲಿ ಇದ್ದರೆ ಎಂಬುದು ಎಲ್ಲರಿಗೂ ಗೊತ್ತು ಎಂದು ವಾಗ್ದಾಳಿ ನಡೆಸಿದರು.