ಮನೆ ರಾಜ್ಯ ರಾಜ್ಯ ಸರ್ಕಾರಿ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳ: ಸಿಎಂ

ರಾಜ್ಯ ಸರ್ಕಾರಿ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳ: ಸಿಎಂ

0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇಕಡ 17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ತಕ್ಷಣದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಪ್ರಕಟಣೆ ಕೂಡ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಳನೇ ವೇತನ ಆಯೋಗವನ್ನು ಈಗಾಗಲೇ ನೇಮಿಸಲಾಗಿದೆ. ಅವರಿಂದ ವರದಿ ಪಡೆದು ಶೀಘ್ರದಲ್ಲಿ ವೇತನ ಪರಿಷ್ಕರಣೆಗೆ ಪ್ರಯತ್ನ ನಡೆಯುತ್ತಿದೆ. ಈಗ ಮಧ್ಯಂತರ ಪರಿಹಾರ ಘೋಷಿಸಲು ನಿರ್ಧರಿಸಲಾಗಿದೆ ಎಂದರು.

ಹಳೆಯ ಪಿಂಚಣಿ ಪದ್ಧತಿ ಮರು ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ನೌಕರರರ ಸಂಘ ಮುಂದಿಟ್ಟಿತ್ತು. ಈ ಕುರಿತು ಅಧ್ಯಯನ ನಡೆಸಲು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ನೇಮಿಸಲಾಗುವುದು. ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಹಳೆಯ ಪಿಂಚಣಿ ಪದ್ಧತಿ ಕುರಿತು ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಿದೆ. ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಈ ಎರಡೂ ವಿಷಯಗಳಲ್ಲಿ ನೌಕರರ ಸಂಘ ಮತ್ತು ಸರ್ಕಾರ ಒಪ್ಪಂದಕ್ಕೆ ಬಂದಿವೆ. ಬುಧವಾರವೇ ಈ ಕುರಿತು ಆದೇಶಗಳನ್ನು ಹೊರಡಿಸಲಾಗುವುದು. ನಂತರ ಸರ್ಕಾರಿ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಲಿದ್ದಾರೆ ಎಂದರು.