ಮನೆ ಅಂತಾರಾಷ್ಟ್ರೀಯ ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್‌ನಿಂದ 18 ಮಕ್ಕಳ ಸಾವು: ಉಜ್ಬೇಕಿಸ್ತಾನ ಆರೋಪ

ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್‌ನಿಂದ 18 ಮಕ್ಕಳ ಸಾವು: ಉಜ್ಬೇಕಿಸ್ತಾನ ಆರೋಪ

0

ತಾಷ್ಕೆಂಟ್(Tashkent): ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ನಿಂದ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಉಜ್ಬೇಕಿಸ್ತಾನವೂ ಕೂಡ ಆರೋಪವೊಂದನ್ನು ಮಾಡಿದೆ.

ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಗಂಭೀರ ಆರೋಪ ಮಾಡಿದೆ.

ಸಾವನ್ನಪ್ಪಿದ 18 ಮಕ್ಕಳು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಡಾಕ್-1 ಮ್ಯಾಕ್ಸ್ ಅನ್ನು ಸೇವಿಸಿದ್ದಾರೆ ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿರಪ್‌’ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ ಎಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ಅಂಶ ಪತ್ತೆಯಾಗಿದೆ. ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳದೇ ಪೋಷಕರು ಮಕ್ಕಳಿಗೆ ಕೆಮ್ಮಿನ ಸಿರಪ್ ಅನ್ನು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಡೋಸ್ ನೀಡಿದ್ದಾರೆ ಎಂದು ಹೇಳಿದೆ.

ವರದಿಗಳ ಪ್ರಕಾರ, ಶೀತ ಹಾಗೂ ಜ್ವರ ಇದ್ದ ಮಕ್ಕಳಿಗೆ ಈ ಸಿರಪ್ ನೀಡಲಾಗುತ್ತದೆ. ಇದೀಗ 18 ಮಕ್ಕಳ ಸಾವಿನ ಬಳಿಕ ದೇಶದ ಎಲ್ಲಾ ಔಷಧಾಲಯಗಳಿಂದ ಡಾಕ್-1 ಮ್ಯಾಕ್ಸ್ ಮಾತ್ರೆಗಳು ಹಾಗೂ ಸಿರಪ್‌’ಗಳನ್ನು ಹಿಂಪಡೆಯಲಾಗಿದೆ.

ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ನೋಯ್ಡಾ ಮೂಲದ ಡ್ರಗ್ ಮೇಕರ್ ತಯಾರಿಸಿರುವ ಸಿರಪ್‌ನೊಂದಿಗೆ ಸಂಬಂಧವಿರುವ ಶಂಕೆಯ ಮೇಲೆ ಭಾರತ ತನಿಖೆಯನ್ನು ಆರಂಭಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.