ಮನೆ ಸ್ಥಳೀಯ ರಾಜ್ಯದಲ್ಲಿ ಹೊಸದಾಗಿ 184 ಇಂದಿರಾ ಕ್ಯಾಂಟೀನ್ ಆರಂಭ : ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಹೊಸದಾಗಿ 184 ಇಂದಿರಾ ಕ್ಯಾಂಟೀನ್ ಆರಂಭ : ಸಿಎಂ ಸಿದ್ದರಾಮಯ್ಯ

0

ಮೈಸೂರು: ರಾಜ್ಯಾದ್ಯಂತ ಬಡವರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರ ಹಸಿವು ನೀಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆಯನ್ನು ಮಾಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸದಾಗಿ 184 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ಅವರು ಮೈಸೂರಿನ ಹಿನಕಲ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಮೈಸೂರಿನ ಹಿನಕಲ್‌ನಲ್ಲಿ ನೂತನವಾಗಿ ನಿರ್ಮಿತ 9 ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ, ಇಂದಿರಾ ಕ್ಯಾಂಟೀನ್‌ಗಳ ಹಿಂದಿನ ಉದ್ದೇಶ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. “ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಬಡವನು ಹಸಿವಿನಿಂದ ಮಡಿಯೋದೇ ಇಲ್ಲ ಎಂಬ ಆಶಯದಿಂದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭಿಸಿದೆವು. ದೂರದ ಊರುಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು, ಕೂಲಿ ಕಾರ್ಮಿಕರು ಹಾಗೂ ದೈನಂದಿನ ಕೆಲಸಗಾರರು ತಿಂಡಿ-ಭೋಜನದಿಂದಾಗಿ ಕಷ್ಟಪಡುವಂತಿಲ್ಲವೆಂಬ ಆಶಯವಿತ್ತು” ಎಂದು ಅವರು ಸ್ಮರಿಸಿದರು.

2017 ರಲ್ಲಿ ಈ ಯೋಜನೆಯನ್ನು ರಾಹುಲ್ ಗಾಂಧಿಯವರ ಉದ್ಘಾಟನೆಯೊಂದಿಗೆ ಪ್ರಾರಂಭಿಸಲಾಗಿತ್ತು. ಆದರೆ ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕ್ಯಾಂಟೀನ್‌ಗಳು ನಿರ್ಲಕ್ಷ್ಯಕ್ಕೆ ಒಳಗಾದವು ಎಂದು ಸಿದ್ದರಾಮಯ್ಯ ಆರೋಪಿಸಿದರು. “ಬಡವರ ಹಕ್ಕನ್ನು ಕಸಿದುಕೊಂಡಂತೆ ಆಗಿತ್ತು. ಆದರೆ ಈಗ ನಾವು ಮತ್ತೆ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಜೀವಂತಗೊಳಿಸುತ್ತಿದ್ದೇವೆ” ಎಂದು ಹೇಳಿದರು.

ಹಿನಕಲ್ ನನ್ನ ರಾಜಕೀಯ ಬದುಕಿನಲ್ಲಿ ಮಹತ್ವಪೂರ್ಣ ಸ್ಥಳ ಎಂದು ಸಿಎಂ ಹೇಳಿ, “ಈ ಗ್ರಾಮದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು. ಇಂಜಿನಿಯರ್‌ಗಳ ನೇಮಕಾತಿ, ಪಿಯುಸಿ ಕಾಲೇಜು ಸ್ಥಾಪನೆ ಸೇರಿ ಎಲ್ಲ ಯೋಜನೆಗಳು ಹಮ್ಮಿಕೊಳ್ಳಲಾಗುತ್ತವೆ” ಎಂದು ಹೇಳಿದರು.