ಮನೆ ಕಾನೂನು ಸಹಕಾರ ಮಹಾಮಂಡಳದ 19 ಕೋಟಿ ಅಕ್ರಮ ವರ್ಗಾವಣೆ ಆರೋಪ: ಮೂವರ ಬಂಧನ

ಸಹಕಾರ ಮಹಾಮಂಡಳದ 19 ಕೋಟಿ ಅಕ್ರಮ ವರ್ಗಾವಣೆ ಆರೋಪ: ಮೂವರ ಬಂಧನ

0

ಬೆಂಗಳೂರು: ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳವು ಬೆಂಗಳೂರು ನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಬಿಡಿಸಿಸಿ) ಮತ್ತು ರಾಜ್ಯ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ನಲ್ಲಿಟ್ಟಿದ್ದ ನಿಗದಿತ ಠೇವಣಿ (ಎಫ್‌ ಡಿ) ಖಾತೆಗಳಿಂದ ₹19.34 ಕೋಟಿಯನ್ನು ಖಾಸಗಿ ವ್ಯಕ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ವಂಚಿಸಿರುವ ಆರೋಪ ಸಂಬಂಧ ಮೂವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಮಹಾಮಂಡಳದ ಅಧ್ಯಕ್ಷ ರಾಜು ವಿ ಅವರು ಅಕ್ಟೋಬರ್‌ ನಲ್ಲಿ ಸಲ್ಲಿಸಿದ್ದ ದೂರು ಆಧರಿಸಿ, ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಶಾಲತಾ ಪಿ, ಇವರ ಪತಿ ಸೋಮಶೇಖರ್‌ ಮತ್ತು ವಿಜಯ್‌ ಕಿರಣ್‌, ಜೆ. ಮಂಜುನಾಥ್‌, ಸುಜಯ್‌, ಬಿಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ ಶಾಖೆಗಳ ವ್ಯವಸ್ಥಾಪಕರು ಹಾಗೂ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಲೆಕ್ಕಪರಿಶೋಧಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂದಿನಿ ಲೇಔಟ್‌ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದ ಮೊದಲ ಆರೋಪಿ ಆಶಾಲತಾ ಅವರ ಸಹೋದರನ ಪುತ್ರ ಜೆ.ಮಂಜುನಾಥ್, ಆತನ ಸ್ನೇಹಿತರಾದ ವಿಜಯ್‌‌ ಕಿರಣ್ ಮತ್ತು ಸುಜಯ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ಧಾರೆ. ಜೆ.ಮಂಜುನಾಥ್‌, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದರು. ವಿಜಯ್‌ ಕಿರಣ್ ಸಾಫ್ಟ್‌ವೇರ್ ಎಂಜಿನಿಯರ್‌ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಿ.ಆಶಾಲತಾ ಹಾಗೂ ಅವರ ಪತಿ ಎನ್.ಸೋಮಶೇಖರ್ ಬ್ಯಾಂಕಾಕ್‌ಗೆ ಪರಾರಿಯಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ದಂಪತಿ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಅವರ ಪತ್ತೆಗೆ ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ನಿರ್ಧರಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‌ಪ್ರಥಮ ದರ್ಜೆ ಸಹಾಯಕಿ ಹಾಗೂ ಅಕೌಂಟೆಂಟ್‌ ಹುದ್ದೆಗೆ ನೇಮಕಗೊಂಡಿದ್ದ ಆಶಾಲತಾ 2017ರಿಂದ 2023ರವರೆಗೂ ಮಹಾಮಂಡಳದ ಪ್ರಭಾರ ಸಿಇಒ ಆಗಿದ್ದರು. ಈ ಅವಧಿಯಲ್ಲಿ ಸಂಸ್ಥೆಯು ಬಿಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ ಶಾಖೆಗಳಲ್ಲಿ ನಿಗದಿತ ಠೇವಣಿಯಲ್ಲಿ ಇರಿಸಿದ್ದ ಮೊತ್ತವನ್ನು ತನ್ನ ಪತಿ ಮತ್ತು ಇತರರ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಜಂಟಿ ಖಾತೆಯಾಗಿದ್ದರೂ ಅಧ್ಯಕ್ಷರ ಸಹಿ ಇಲ್ಲದೆ ಆಶಾಲತಾ ಅವರೊಬ್ಬರೇ ನಕಲಿ ಸಹಿ ಮಾಡಿ, ಪತಿ ಹಾಗೂ ಇತರೆ ಆರೋಪಿಗಳ ಖಾತೆಗೆ ಮಹಾಮಂಡಳದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ನಿಶ್ಚಿತ ಠೇವಣಿ ಇರಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲೆಕ್ಕಪರಿಶೋಧಕರಿಗೂ ಸಲ್ಲಿಸಿದ್ದರು. ಲೆಕ್ಕಪರಿಶೋಧಕರು ಈ ನಕಲಿ ದಾಖಲೆಗಳನ್ನು ಪರಿಶೀಲಿಸದೆ ವರದಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಾದ ಮಂಜುನಾಥ್, ವಿಜಯ್‌ ಕಿರಣ್ ಮತ್ತು ಸುಜಯ್ ತಮ್ಮ ಖಾತೆಗೆ ಜಮೆಯಾಗಿದ್ದ ಹಣವನ್ನು ಡ್ರಾ ಮಾಡಿ ಆಶಾಲತಾಗೆ ಮರಳಿಸಿದ್ದರು. ಆರೋಪಿಗಳು ಪ್ರತಿ ಹಣಕಾಸು ವ್ಯವಹಾರಕ್ಕೆ ₹15 ಸಾವಿರ ಕಮಿಷನ್ ಪಡೆದುಕೊಳ್ಳುತ್ತಿದ್ದರು. ಅಕ್ಟೋಬರ್ 9ರಂದು ರಾಜ್ಯದ ಪ್ರಮುಖ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆದಿತ್ತು. ಆಗ ವಂಚನೆ ಪ್ರಕರಣ ಬಯಲಾಗಿತ್ತು. ನಂತರ ತನಿಖೆ ನಡೆಸುವಂತೆ ರಾಜು ವಿ ಅವರು ಪೊಲೀಸರಿಗೆ ದೂರು ನೀಡಿದ್ದರು.