ಮೈಸೂರು: ಜಿಲ್ಲಾ ವನಮಹೋತ್ಸವ ಸಮಿತಿ ವತಿಯಿಂದ ವನಮಹೋತ್ಸವ ಸಪ್ತಾಹದ ಅಂಗವಾಗಿ ಜುಲೈ 1ರಿಂದ 7 ರವರಗೆ ಮೈಸೂರು ಜಿಲ್ಲೆಯಾದ್ಯಂತ 1 ಲಕ್ಷ 43 ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನ ವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಕೈ ಜೋಡಿಸಲು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.
ಬುಧವಾರ ಸಂಜೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಗೂಗಲ್ ಮೀಟ್ ಸಭೆಯಲ್ಲಿ ಮಾತನಾಡಿದ ಅವರು ವನಮಹೋತ್ಸವ ಸಪ್ತಾಹವನ್ನು ಜಿಲ್ಲೆಯಾದ್ಯಂತ ಸಂಘ ಸಂಸ್ಥೆಗಳ ನೆರವಿನಿಂದ ಯಶಸ್ವಿಗೊಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಅಧಿಕಾರಿಗಳ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖಾ ವತಿಯಿಂದ ನೆಡಲಾಗುವ ಗಿಡಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಜಿಲ್ಲಾ ಪಂಚಾಯಿತಿ ವತಿಯಿಂದ 1 ಲಕ್ಷ 28 ಸಾವಿರ, ಪೊಲೀಸ್ ಅಧೀಕ್ಷಕರ ಕಛೇರಿಯಿಂದ 803, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ ಪಿರಿಯಾಪಟ್ಟಣ ಇವರಿಂದ 697, ಶಿಶು ಯೋಜನಾಭಿವೃದ್ದಿ ಕಛೇರಿ ಮೈಸೂರು ಗ್ರಾಮಾಂತರ ಯೋಜನೆ ವತಿಯಿಂದ 923, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 3000, ಮಹಾನಗರ ಪಾಲಿಕೆಯಿಂದ 5000 ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗಿಡಗಳ ನೆಡಲು ಯೋಜಿಸಿರುವುದಾಗಿ ಮಾಹಿತಿ ನೀಡಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಸಸ್ಯ ಕ್ಷೇತ್ರಗಳಲ್ಲಿ ವಿವಿಧ ಅಳತೆಯ ಸಸ್ಯಗಳು ಲಭ್ಯವಿದ್ದು, ಸಸಿಗಳನ್ನು ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ.ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ನೆಡುವ ಸಸಿಗಳಿಗೆ ಮೌಲ್ಯಾಮಾಪನ ಮಾಡಿ ಬದುಕುಳಿದ ಸಸಿಗಳಿಗೆ ಮೊದಲನೇ ವರ್ಷಕ್ಕೆ ರೂ.35, ಎರಡನೇ ವರ್ಷಕ್ಕೆ ರೂ.40, ಹಾಗೂ ಮೂರನೇ ವರ್ಷಕ್ಕೆ ರೂ.50 ಪ್ರೋತ್ಸಾಹ ಧನ ನೀಡಲಾಗುತ್ತದೆ.ಜಾಗತಿಕ ತಾಪಮಾನ ಹಾಗೂ ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸಬೇಕೆಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.