ಚಾಮರಾಜನಗರ(Chamarajnagar): ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅತ್ಯಲ್ಪ ಅವಧಿಯಲ್ಲೇ ಭಾರಿ ಮೊತ್ತದ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕೇವಲ 28 ದಿನಗಳಲ್ಲಿ ದೇವಾಲಯಕ್ಕೆ ಹರಕೆ ರೂಪದಲ್ಲಿ 2.13 ಕೋಟಿ ರೂಪಾಯಿ ಹರಿದು ಬಂದಿದೆ.
ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದ್ದು, ಬರೋಬ್ಬರಿ 2,13,53,095ರೂ. ಸಂಗ್ರಹವಾಗಿದೆ. ಇದರಲ್ಲಿ ನಾಣ್ಯವೇ 13 ಲಕ್ಷ ರೂ. ದಷ್ಟಿದೆ. ಜೊತೆಗೆ 1.9 ಕೆ.ಜಿ ಬೆಳ್ಳಿ ಹಾಗೂ 45 ಗ್ರಾಂ ಚಿನ್ನವನ್ನು ಭಕ್ತರು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಮಲೆ ಮಹದೇಶ್ವರ ದೇವಾಲಯದ ಹುಂಡಿ ಏಣಿಕೆ ಕಾರ್ಯಕಳೆದ ತಿಂಗಳು ಕೂಡ ಕೇವಲ 28 ದಿನಗಳಿಗೆ 2.83 ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ಸಾಲು ಸಾಲು ರಜೆ, ಯುಗಾದಿ ಸಡಗರದಿಂದಾಗಿ ಭಕ್ತರು ಮುದ್ದು ಮಾದಪ್ಪನಿಗೆ ಭರಪೂರ ಕಾಣಿಕೆ ಅರ್ಪಿಸಿದ್ದಾರೆ.