ಮನೆ ರಾಜ್ಯ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ 2.28 ಕೋಟಿ ರೂ. ಸಂಗ್ರಹ

ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ 2.28 ಕೋಟಿ ರೂ. ಸಂಗ್ರಹ

0

ಚಾಮರಾಜನಗರ: ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 2.28 ಕೋಟಿ ರೂ. ಸಂಗ್ರಹವಾಗಿದೆ.

ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ಸಮ್ಮುಖದಲ್ಲಿ ಸುಮಾರು 12 ಗಂಟೆಗಳ ಕಾಲ ಕಾಣಿಕೆ ಹಣ ಎಣಿಕೆ ಮಾಡಲಾಯಿತು.

ಕೇವಲ 39 ದಿನಗಳಲ್ಲಿ ಬರೋಬ್ಬರಿ 2,28,63,914 ರೂ. ಹಣ ಸಂಗ್ರಹವಾಗಿದೆ‌‌. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ ಹಾಗೂ ಸರ್ಕಾರಿ ರಜೆ ದಿನಗಳು, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಹುಂಡಿಗೆ ಹಾಕಿದ್ದಾರೆ.

ಒಟ್ಟು 2.28 ಕೋಟಿ ರೂ. ನಗದು, 92.5 ಗ್ರಾಂ ಚಿನ್ನ ಹಾಗೂ 2.7 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ.