ಬೆಂಗಳೂರು: ವಿದ್ಯುತ್ ಬಿಲ್ ಪಾವತಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಿರುವ ಪ್ರಕರಣ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ವಿಠಲ್ ಮಲ್ಯ ರಸ್ತೆಯ ನಿವಾಸಿಯೊಬ್ಬರಿಗೆ ಬೆಸ್ಕಾಂ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿಯೊಬ್ಬ ವಂಚನೆ ಮಾಡಿದ್ದಾನೆ. ಜುಲೈ 13 ರಂದು ಕರೆ ಮಾಡಿದ ಅನಾಮಧೇಯ ವ್ಯಕ್ತಿ, ವಿದ್ಯುತ್ ಬಿಲ್ ಪಾವತಿಸಿ, ಇಲ್ಲವಾದಲ್ಲಿ ಸಂಪರ್ಕ ಸ್ಥಗಿತಗೊಳಿಸುತ್ತೇವೆ ಎಂದು ಕರೆ ಮಾಡಿದ್ದಾನೆ. ಅದರಂತೆ ದೂರುದಾರ ಬಿಲ್ ಪಾವತಿಸಲು ಮುಂದಾಗಿದ್ದಾರೆ.
ಈ ವೇಳೆ ಆರೋಪಿ ಲಿಂಕ್ ವೊಂದನ್ನು ಕಳಿಸಿದ್ದ. ಆ ಲಿಂಕ್ ನಿಂದ ಆನ್ ಲೈನ್ ಪಾವತಿ ವಿಫಲವಾದಾಗ ಮತ್ತೂಂದು ಲಿಂಕ್ ಕಳಿಸಿ 10 ರೂ. ಪಾವತಿಸಲು ಹೇಳಿದ್ದ. ಅದರಂತೆ ದೂರುದಾರರು 10 ರೂ. ಪಾವತಿಸಿದ್ದರು. ತಕ್ಷಣ ಖಾತೆಯಲ್ಲಿದ್ದ 2 ಲಕ್ಷ ರೂ. ದೋಚಿರುವ ವಂಚಕ, ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ವಂಚನೆಗೊಳಗಾದ ವ್ಯಕ್ತಿ ದೂರು ದಾಖಲಿಸಿದ್ದಾರೆ.