ಮಂಗಳೂರು: ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೂಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹೀಗಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ಪತ್ರ ಬರೆದು ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಗಳನ್ನು ತುರ್ತಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿರುವ ರೈಲ್ವೆ ಅಧಿಕಾರಿಗಳು ಮಂಗಳೂರು ಬೆಂಗಳೂರು ಮಧ್ಯೆ ಎರಡು ವಿಶೇಷ ರೈಲಿನ ಘೋಷಣೆ ಮಾಡಿದ್ದಾರೆ.
ಮಂಗಳೂರು ಬೆಂಗಳೂರು ನಡುವೆ ಪ್ರತಿದಿನ ಪ್ರಯಾಣಿಸುವ ಜನರ ಸಂಖ್ಯೆ ಮತ್ತು ಪರ್ಯಾಯ ಸಾರಿಗೆ ಆಯ್ಕೆಗಳ ಕೊರತೆಯನ್ನು ಪರಿಗಣಿಸಿ, ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸುವ ಅಗತ್ಯವನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹೆಚ್ಚುವರಿ ಸೇವೆಗಳನ್ನು ಆದಷ್ಟು ಬೇಗ ಜಾರಿಗೊಳಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಮಂಗಳೂರು ಬೆಂಗಳೂರು ವಿಶೇಷ ರೈಲು ಸಮಯ
ರೈಲು ಸಂಖ್ಯೆ 06547 / 06548 ಮಂಗಳೂರು ಜಂಕ್ಷನ್ ಹಾಗೂ ಯಶವಂತಪುರ ಮಧ್ಯೆ ಸಂಚರಿಸಲಿದೆ. ರೈಲು ಸಂಖ್ಯೆ 06547 ಜುಲೈ 19 ರಂದು ಬೆಂಗಳೂರಿನಿಂದ ಮಂಗಳೂರಿಗೆ, ರೈಲು ಸಂಖ್ಯೆ 06548 ಜುಲೈ 20 ರಂದು ಮಂಗಳೂರಿನಿಂದ ಯಶವಂತಪುರಕ್ಕೆ ತೆರಳಲಿದೆ.
ರೈಲು ಸಂಖ್ಯೆ 06549 / 06550 ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಜುಲೈ 21 ಮತ್ತು 22 ರಂದು ಸಂಚರಿಸಲಿದೆ. ರೈಲು ಸಂಖ್ಯೆ 06549 ಜುಲೈ 21 ಮತ್ತು 22 ರಂದು ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಸಂಚರಿಸಲಿದ್ದು, ರೈಲು ಸಂಖ್ಯೆ 06550 ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಜುಲೈ 21 ಮತ್ತು 22 ರಂದು ಸಂಚರಿಸಲಿದೆ.