ಮನೆ ಸ್ಥಳೀಯ ನಿರಪರಾಧಿಗೆ 2 ವರ್ಷ ಜೈಲು: ಮೈಸೂರಿನಲ್ಲಿ ಸುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆ ಏ.23ಕ್ಕೆ

ನಿರಪರಾಧಿಗೆ 2 ವರ್ಷ ಜೈಲು: ಮೈಸೂರಿನಲ್ಲಿ ಸುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆ ಏ.23ಕ್ಕೆ

0

ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಘಾತಕಾರಿ ಪ್ರಕರಣ ಇದೀಗ ನ್ಯಾಯದ ಹಾದಿಯತ್ತ ಹೆಜ್ಜೆ ಇಡುತ್ತಿದೆ. ಈ ಪ್ರಕರಣದಲ್ಲಿ ನಿರಪರಾಧಿಯಾದ ವ್ಯಕ್ತಿ ಸುರೇಶ್ ತಪ್ಪಿತಸ್ಥನೆಂಬ ಆರೋಪದ ಆಧಾರದ ಮೇಲೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದ ಪ್ರಸಂಗ ಇಂದು ರಾಜ್ಯದ ನ್ಯಾಯದ ವ್ಯವಸ್ಥೆ ಮತ್ತು ಪೊಲೀಸರು ನಡೆಸುವ ತನಿಖಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.

ಪ್ರಕರಣದ ಹಿನ್ನೆಲೆ

ಒಂದು ಮಹಿಳೆ ನಾಪತ್ತೆಯಾಗಿದ್ಲು. ಮಲ್ಲಿಗೆ ಎಂಬ ಹೆಸರಿನ ಆ ಮಹಿಳೆಯ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಆಕೆಯ ಪತಿ ಸುರೇಶ್‌ನ ಮೇಲೆ ಆಧಾರರಹಿತ ಅನುಮಾನ ಹುಟ್ಟಿಸಿ, ಬೆಟ್ಟದಪುರ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು. ಈ ಹಿಂದೆ ಯಾವುದೇ ನಿಖರವಾದ ಸಾಕ್ಷ್ಯಗಳಿಲ್ಲದೇ ಸುರೇಶ್ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪರಿಣಾಮವಾಗಿ ಅವರು ಎರಡು ವರ್ಷ ಜೈಲಿನ ಸುದೀರ್ಘ ಕಷ್ಟವನ್ನು ಅನುಭವಿಸಿದರು.

ಆದರೆ ಜೈಲಿನಿಂದ ಬಿಡುಗಡೆಯಾದ ನಂತರ, ಸುರೇಶ್‌ಗೆ ತನ್ನ ಪತ್ನಿ ಮಲ್ಲಿಗೆ ಇನ್ನೂ ಜೀವಂತವಾಗಿರುವುದು ಸ್ಪಷ್ಟವಾಯಿತು. ಈ ವಿಷಯವನ್ನು ತಕ್ಷಣವೇ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಈ ಘಟನೆ ಪ್ರಕರಣದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನ್ಯಾಯಾಲಯದ ಕ್ರಮ ಮತ್ತು ವರದಿ ಸಲ್ಲಿಕೆ

ಈ ಹಿನ್ನೆಲೆಯಲ್ಲಿ ಮೈಸೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ಕುರಿತ ವಿಚಾರಣೆಯನ್ನು ಆರಂಭಿಸಿತು. ನ್ಯಾಯಾಲಯದ ಸೂಚನೆಯಂತೆ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಈ ಪ್ರಕರಣದ ಎಲ್ಲಾ ಸಾಕ್ಷ್ಯಗಳು ಹಾಗೂ ತನಿಖಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅವರು ನೀಡಿದ ವರದಿಯ ಆಧಾರದ ಮೇಲೆ ನ್ಯಾಯಮೂರ್ತಿ ಈ ಪ್ರಕರಣದ ತೀರ್ಪನ್ನು ಏಪ್ರಿಲ್ 23ರಂದು ಪ್ರಕಟಿಸಲಿದ್ದಾರೆ.

ವಕೀಲರ ಅಭಿಪ್ರಾಯ ಮತ್ತು ನ್ಯಾಯದ ಆಶೆ

ಸುರೇಶ್ ಪರವಾಗಿ ವಕೀಲ ಪಾಂಡು ಪೂಜಾರಿ ಮಾತನಾಡುತ್ತಾ, ಸುರೇಶ್ ಸಂಪೂರ್ಣ ನಿರಪರಾಧಿಯಾಗಿದ್ದು, ಅವನ ಮೇಲೆ ಐಪಿಸಿ ಸೆಕ್ಷನ್ 211 ಅಡಿಯಲ್ಲಿ ಸುಳ್ಳು ಆರೋಪ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಈ ಸುಳ್ಳು ಆರೋಪದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ. ಕೋರ್ಟ್ ಈ ಮನವಿಯನ್ನು ಸ್ವೀಕರಿಸಿದ್ದು, ಅದರ ತೀರ್ಪು ಸಹ ಏಪ್ರಿಲ್ 23ರಂದು ಪ್ರಕಟವಾಗಲಿದೆ.

ಪರಿಹಾರಕ್ಕಾಗಿ ಒತ್ತಾಯ

ಈ ಮಧ್ಯೆ ಸರ್ಕಾರಿ ಅಭಿಯೋಜಕರು ಸಹ ಸುರೇಶ್ ಮೇಲೆ ನಡೆದ ಅವ್ಯಾಹತ ದೌರ್ಜನ್ಯವನ್ನು ಗುರುತಿಸಿ, ಅವರಿಗೆ ಗೌರವಪೂರ್ಣ ಬಿಡುಗಡೆ ಜೊತೆಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದು ರಾಜ್ಯದ ನ್ಯಾಯ ವ್ಯವಸ್ಥೆಯ ಮಾನವೀಯ ಮುಖವನ್ನು ತೋರಿಸುವಂತಾಗಿದೆ.

ಈ ಪ್ರಕರಣವು ಒಂದು ನಿರಪರಾಧ ವ್ಯಕ್ತಿ ಹೇಗೆ ಸುಳ್ಳು ಆರೋಪದ ಹೆಸರಲ್ಲಿ ತನ್ನ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಳ್ಳಬೇಕು ಎಂಬುದರ ದುರಂತದ ಉದಾಹರಣೆ. ಏ.೨೩ರಂದು ನಿಗದಿಯಾದ ತೀರ್ಪು ಮಾತ್ರ ಈ ದುರಂತಕ್ಕೆ ಪರಿಹಾರ ನೀಡಬಹುದೆಂಬ ಆಶೆಯನ್ನು ಹುಟ್ಟುಹಾಕಿದೆ.