ಮನೆ ರಾಜ್ಯ ಸರ್ಕಾರಕ್ಕೆ 2 ವರ್ಷ : ಸಿಎಂಗೆ ‘ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ನೀಡಿದ ಬಿಜೆಪಿ

ಸರ್ಕಾರಕ್ಕೆ 2 ವರ್ಷ : ಸಿಎಂಗೆ ‘ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ನೀಡಿದ ಬಿಜೆಪಿ

0

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿ ಬಂದ ಹಿನ್ನೆಲೆ, ಬಿಜೆಪಿ ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ `ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಎಂಬ ಕುಟುಕು ಬಿರುದು ನೀಡಿದೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಹಿಗ್ಗಾ ಮುಗ್ಗಾ ಹರಿದು ತಿಳಿಸಿದ ಬಿಜೆಪಿ, ಆಧಾರಿತ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದೆ.

ಬೆಂಗಳೂರು ನಗರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಸರ್ಕಾರ ದಿವಾಳಿಯಾಗಿದೆ. ಸಂಬಳ ಕೊಡಲು ಸಾಲ ತೆಗೆದುಕೊಳ್ಳುವ ಸ್ಥಿತಿ ಬಂದಿದೆ. ಸಚಿವ ಡಿ.ಕೆ. ಶಿವಕುಮಾರ ಸ್ವತಃ ಇದೇ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದಾರೆ” ಎಂದು ಟೀಕಿಸಿದರು.

ತಿಂಗಳಿಗೊಮ್ಮೆ 2 ಸಾವಿರ ಹಣ ಕೊಡಲು ನಿಮ್ಮಪ್ಪನ ಮನೆ ಗಂಟಾ ಎಂದು ಕೇಳಿದ್ದಾರೆ. ತಿಂಗಳಿಗೊಮ್ಮೆ 2 ಸಾವಿರ ಫಟಾಫಟ್ ಹಣ ಕೊಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇಲ್ಲಿ ಶಿವಕುಮಾರ್ ಕಟಾಕಟ್, ಯಾವಾಗ ಹಣ ಬರುತ್ತೋ ಆಗ ದುಡ್ಡು ಕೊಡುವುದಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.

ಮುಖ್ಯಮಂತ್ರಿಗಳೇ.. ಯಾವ ಸಾಧನೆಗಾಗಿ ಈ 2 ವರ್ಷದ ಸಂಭ್ರಮಾಚರಣೆ ಮಾಡಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರು. ಹಾಲಿನ ದರ ಏರಿಸಿದ್ದೀರಿ. ನೀರು, ವಿದ್ಯುತ್, ಪೆಟ್ರೋಲ್, ಡೀಸೆಲ್, ಆಸ್ತಿ ತೆರಿಗೆ ಇವೆಲ್ಲವನ್ನೂ ಏರಿಸಿದ್ದೀರಿ. ದರ ಏರಿಸಿದ ಪರಿಣಾಮವಾಗಿ ಜನರು ಕಷ್ಟದಲ್ಲಿರುವಾಗ, ಸಮಾವೇಶ ಮಾಡಬೇಕೆಂದು ನಿಮಗೆ ಯಾಕೆ ಅನ್ನಿಸಿದೆ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ರಾಜ್ಯ ಸರ್ಕಾರದ ಆಡಳಿತದ ಎರಡು ವರ್ಷಗಳ ಅವಧಿಯಲ್ಲಿ ನಡೆದಿತ್ತವೆಂದು ಬಿಜೆಪಿ ಅಂಕಿ-ಅಂಶ ಸಹಿತ ಆಯ್ದ ವಿಷಯಗಳಲ್ಲಿ ವೈಫಲ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ಆರ್. ಅಶೋಕ್ ಈ ವೇಳೆ ಮಾತನಾಡುತ್ತಾ, ಪರಿಶಿಷ್ಟ ಜಾತಿಗೆ ಸೇರಿದ 187 ಕೋಟಿ ರೂ.ಯನ್ನು ಫಟಾಫಟ್ ಲೂಟಿ ಮಾಡಿದ್ದೀರಿ. ಇನ್ನೊಂದೆಡೆ 89 ಕೋಟಿ ರೂ. ಲೂಟಿ ಆಗಿರುವುದಾಗಿ ಸಿದ್ದರಾಮಯ್ಯನವರೇ ಅಧಿವೇಶನದಲ್ಲಿ ಹೇಳಿದ್ದಾರೆ. ಮುಡಾ ಹಗರಣದಲ್ಲಿ ವಾಸ್ತು ಪ್ರಕಾರ ಇರುವ 14 ಮೂಲೆ ನಿವೇಶನಗಳನ್ನು ಲೂಟಿ ಹೊಡೆದಿದ್ದಕ್ಕೆ ನಿಮ್ಮ ಈ ಸಂಭ್ರಮಾಚರಣೆಯೇ? ಎಂದು ಕೇಳಿದರು.

ಕಳಪೆ ದ್ರಾವಣ ನೀಡಿ 15-20 ಬಾಣಂತಿಯರ ಸಾವಾಗಿದೆಯಲ್ಲವೇ? ಸಚಿವರೇ, ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಹೋದರೆ ವಾಪಸ್ ಬರುವುದೇ ಇಲ್ಲವೆಂಬ ಗ್ಯಾರಂಟಿಗಾಗಿ ಈ ಸಾಧನೆಯೇ? ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಬರುವುದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಿಮ್ಮ ಸಚಿವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನೇಹಾ ಲವ್ ಜಿಹಾದ್ ಕೊಲೆ ಆಯಿತು. ಇದಕ್ಕಾಗಿ ಸಂಭ್ರಮಾಚರಣೆಯೇ? ನಾಗಮಂಗಲದಲ್ಲಿ ಪೊಲೀಸ್ ವ್ಯಾನಿನಲ್ಲೇ ಗಣೇಶನ ವಿಗ್ರಹದ ಮೆರವಣಿಗೆ ನಡೆಸಿ ವಿಸರ್ಜಿಸಿದ್ದೀರಿ. ಗಣೇಶನಿಗೂ ಜೈಲುವಾಸ ಮಾಡಿದ್ದೀರಿ.

ಮಳೆಯಿಂದ 5 ಜನ ಮೃತಪಟ್ಟಿದ್ದಾರೆ. ಈ ಸಾವಿನ ಮೇಲೆ ಸಮಾವೇಶ ಮಾಡಿದ್ದೀರಿ. ಬೆಂಗಳೂರಿನ ಜನರು ಕರ್ನಾಟಕ ಬಜೆಟ್‌ನ ಶೇ. 67ರಷ್ಟು ತೆರಿಗೆ ಕಟ್ಟುತ್ತಾರೆ. ಅಂಥವರನ್ನು ನೀರಿನಲ್ಲಿ ಮುಳುಗಿಸಿದ್ದೀರಿ. ಬೆಂಗಳೂರನ್ನು ತೇಲುವ ಹಾಗೇ ಮಾಡಿದ್ದೀರಲ್ಲವೇ? ಇದಕ್ಕಾಗಿ ನಿಮ್ಮ ಸಮಾವೇಶ ಮಾಡಿದ್ದೀರಾ ಎಂದು ಟೀಕಾ ಪ್ರಹಾರ ಮಾಡಿದರು.