ಮನೆ ರಾಷ್ಟ್ರೀಯ ಕಾನ್ಪುರ ಬಳಿ ಹಳಿತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ 20 ಬೋಗಿಗಳು

ಕಾನ್ಪುರ ಬಳಿ ಹಳಿತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ 20 ಬೋಗಿಗಳು

0

ನವದೆಹಲಿ: ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

Join Our Whatsapp Group

2:30 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣದ ನಡುವೆ ಘಟನೆ ನಡೆದಿದೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸಬರಮತಿ ಎಕ್ಸ್‌ಪ್ರೆಸ್‌ನ ಇಂಜಿನ್ ಇಂದು ಬೆಳಗಿನ ಜಾವ 02:35ಕ್ಕೆ ಕಾನ್ಪುರ ಬಳಿ ಟ್ರ್ಯಾಕ್‌ನಲ್ಲಿ ಇರಿಸಲಾಗಿದ್ದ ವಸ್ತುವೊಂದಕ್ಕೆ ಡಿಕ್ಕಿ ಹೊಡೆದು ಹಳಿತಪ್ಪಿದೆ. ಇಂಜಿನ್​ಗೆ ತೀವ್ರ ಹೊಡೆತ ಬಿದ್ದಿರುವ ಗುರುತುಗಳು ಕಂಡುಬಂದಿದ್ದು, ಸಾಕ್ಷ್ಯ ಕಲೆ ಹಾಕಲಾಗಿದೆ. ಐಬಿ ಮತ್ತು ಯುಪಿ ಪೊಲೀಸರು ತನಿಖೆ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಗಾಯಗಳಾಗಿಲ್ಲ. ಪ್ರಯಾಣಿಕರಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ” ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಘಟನೆಯಲ್ಲಿ ಬೋಗಿಗಳಿಗೆ ಹಾನಿ ಉಂಟಾಗಿದೆ. ರೈಲ್ವೇ ಹಳಿಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಭಾರತೀಯ ರೈಲ್ವೆ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ”ಹಳಿತಪ್ಪಿದ ಕಾರಣ 7 ರೈಲುಗಳನ್ನು ರದ್ದುಗೊಳಿಸಿ, ಮೂರು ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಪಘಾತ ಸ್ಥಳದಿಂದ ಕಾನ್ಪುರ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಸಾಗಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ” ಎಂದು ಉತ್ತರ ಮಧ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

“ಅಲ್ಲದೆ, ಪ್ರಯಾಣಿಕರನ್ನು ಕಾನ್ಪುರಕ್ಕೆ ಮರಳಿ ಕರೆದೊಯ್ಯಲು 8 ಕೋಚ್‌ಗಳ ಮೆಮು ರೈಲು ಅಪಘಾತದ ಸ್ಥಳಕ್ಕೆ ಕಾನ್ಪುರದಿಂದ ತೆರಳಿದೆ. ಜನರನ್ನು ನಿಗದಿತ ಸ್ಥಳಗಳಿಗೆ ಕಳುಹಿಸಲು ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ” ಎಂದು ತ್ರಿಪಾಠಿ ಹೇಳಿದರು.

ಸಹಾಯವಾಣಿ ಸಂಖ್ಯೆ: ರೈಲ್ವೆಯು ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಪ್ರಯಾಗ್ರಾಜ್: 0532-2408128, 0532-2407353, ಕಾನ್ಪುರ್: 0512-2323018, 0512-2323015, ಮಿರ್ಜಾಪುರ: 054422200090, 7591 59702, ಅಹಮದಾಬಾದ್: 07922113977, ಬನಾರಸ್ ನಗರ: 8303994411, ಗೋರಖ್‌ಪುರ: 0551-2208088.

ಅಲ್ಲದೆ, ಝಾನ್ಸಿ ರೈಲು ವಿಭಾಗಕ್ಕೆ ಈ ಸಹಾಯ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ – 0510-2440787 ಮತ್ತು 0510-2440790. ಒರೈ – 05162-252206, ಬಂದಾ – 05192-227543, ಲಲಿತ್‌ಪುರ ಜೆಎನ್ – 07897992404.