ಮೈಸೂರು(Mysuru): ನಿಗದಿತಕ್ಕಿಂತ ಹೆಚ್ಚುವರಿಯಾಗಿ 20 ರೂ. ವಸೂಲಿ ಮಾಡಿದ ವ್ಯಾಪಾರಿ ವಿರುದ್ಧ ಹೋರಾಡಿದ ಗ್ರಾಹಕನಿಗೆ ಸತತ ಮೂರು ವರ್ಷಗಳ ಬಳಿಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನ್ಯಾಯ ದೊರಕಿದೆ.
ತಾನೇ ಸ್ವತಃ ವಕೀಲಿಕೆ ನಡೆಸುವ ಮೂಲಕ ವ್ಯಾಪಾರಿ ವಿರುದ್ಧ ವಾದ ಮಂಡಿಸಿದ್ದು,ಗೆದ್ದಿರುವುದು ವಿಶೇಷವಾಗಿದೆ.
ಮೈಸೂರಿನ ವಿಜಯ ನಗರದ ನಿವಾಸಿ, ನಿವೃತ್ತ ಶಿಕ್ಷಕ ಸತ್ಯನಾರಾಯಣ ಅವರು ಹೋರಾಟದ ಮೂಲಕ ಗ್ರಾಹಕರ ಹಕ್ಕನ್ನು ಪ್ರತಿಪಾದಿಸಿದ್ದಾರೆ.
ದುಪ್ಪಟ್ಟು ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಸತ್ಯನಾರಾಯಣ ಅವರು 2019 ರಲ್ಲಿ ಹನುಮಂತರಾಜು ಮಾಲೀಕತ್ವದ ಮಾರುತಿ ಮ್ಯಾಚಿಂಗ್ ಸೆಂಟರ್‌ನಲ್ಲಿ 3 ಸ್ಯಾರಿ ಫಾಲ್ಸ್ ಗಳನ್ನು ಖರೀದಿ ಮಾಡಿದ್ದರು. ಅಂಗಡಿ ಮಾಲೀಕ 30 ರೂ. ನಂತೆ 90 ರೂ. ಎಂಆರ್‌ಪಿ ದರವನ್ನು ಬಿಟ್ಟು 110 ರೂ.ಗಳನ್ನು ಸತ್ಯನಾರಾಯಣ ಅವರಿಂದ ಪಡೆದು ರಶೀದಿ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಂಗಡಿ ಮಾಲೀಕ ಬೇಜವಾಬ್ದಾರಿಯಿಂದ ಹಾರಿಕೆಯ ಉತ್ತರ ನೀಡಿದ್ದರು. ವ್ಯಾಪಾರಿಯ ವರ್ತನೆಯಿಂದ ಬೇಸತ್ತ ಗ್ರಾಹಕ ಸತ್ಯನಾರಾಯಣ ಅವರು, ವ್ಯಾಪಾರಿಯಿಂದ 61 ಸಾವಿರ ರೂ. ಪರಿಹಾರ ನೀಡಬೇಕು ಎಂದು 2020ರಲ್ಲಿ ಆಯೋಗದ ಮೊರೆ ಹೋಗಿದ್ದರು.
ಸತತ ಎರಡು ವರ್ಷ ಕಾಲ ನಡೆದ ವಿಚಾರಣೆ ಬಳಿಕ ಆಯೋಗದ ಅಧ್ಯಕ್ಷರು, ಗ್ರಾಹಕರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಾಪಾರಿಗೆ ಎಂಆರ್ ಪಿಗಿಂತ ಹೆಚ್ಚುವರಿಯಾಗಿ 20 ರೂ. ಪಡೆದಿರುವುದು ಸೇರಿದಂತೆ ವ್ಯಾಪಾರಿಯಿಂದ ಉಂಟಾದ ತೊಂದರೆ, ಪ್ರಕರಣದ ವೆಚ್ಚ ಸೇರಿ 6,020 ರೂ. ಪಾವತಿಸುವಂತೆ ಆಯೋಗದ ಅಧ್ಯಕ್ಷ ಬಿ.ನಾರಾಯಣಪ್ಪ ಆದೇಶ ಮಾಡಿದ್ದಾರೆ.