ಮನೆ ಕಾನೂನು 200 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶದಲ್ಲಿ...

200 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶದಲ್ಲಿ ಇ.ಡಿ ದಾಳಿ

0

ಜಮ್ಮು: ಭಾರತ್ ಪೇಪರ್ಸ್ ಲಿಮಿಟೆಡ್‌ ಗೆ(ಬಿಪಿಎಲ್‌) ಸಂಬಂಧಿಸಿದ 200 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳ ಹಲವೆಡೆ ದಾಳಿ ನಡೆಸಿದೆ.

ಮೂರೂ ರಾಜ್ಯಗಳ 9 ಸ್ಥಳಗಳಲ್ಲಿ  ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬಿಪಿಎಲ್ ಕಂಪನಿಯು ಜಮ್ಮು ಮತ್ತು ಲುಧಿಯಾನ ಮೂಲದ ಭಾರತ್ ಬಾಕ್ಸ್ ಫ್ಯಾಕ್ಟರಿ ಇಂಡಸ್ಟ್ರೀಸ್‌ನ(ಬಿಪಿಎಫ್‌ ಐಎಲ್) ಅಸೋಸಿಯೇಟ್ ಸಂಸ್ಥೆಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಈ ಸಂಸ್ಥೆಯ ನಿರ್ದೇಶಕರು ₹200 ಕೋಟಿ ವಂಚಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಿಎನ್‌ ಬಿ ಮತ್ತು ಕರೂರ್ ವೈಶ್ಯ ಬ್ಯಾಂಕ್‌ ಗೂ ವಂಚಿಸಿರುವ ಆರೋಪವಿದೆ.

ರಾಜಿಂದರ್ ಕುಮಾರ್, ಪ್ರವೀಣ್ ಕುಮಾರ್, ಬಲ್ಜಿಂದರ್ ಸಿಂಗ್, ಅನಿಲ್ ಕುಮಾರ್ ಮತ್ತು ಅನಿಲ್ ಕಶ್ಯಪ್ ಭಾರತ್ ಪೇಪರ್ಸ್ ಲಿಮಿಟೆಡ್‌ ನ ನಿರ್ದೇಶಕರಾಗಿದ್ದಾರೆ.