ಬಾಗಲಕೋಟೆ(Bagalakote): 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಘೋಷಣೆಗೆ ಈಗಲೂ ಬದ್ಧರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ವಿದ್ಯುತ್ ನೀಡುವ ಕುರಿತು ಬಿಜೆಪಿಯವರಿಗೆ ಈ ಬಗ್ಗೆ ಅನುಮಾನ ಬೇಡ. ಅನುಮಾನವಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ವಿದ್ಯುತ್ ಉತ್ಪಾದನೆ ದುಪ್ಪಟ್ಟಾಗಿದೆ. ವಿದ್ಯುತ್ ಮಾರಾಟ ಮಾಡುತ್ತಿದ್ದೇವೆ. ಸೋರಿಕೆ ತಡೆಗಟ್ಟಿ ಹೇಗೆ ಉಚಿತವಾಗಿ ನೀಡಬಹುದು ಎಂದು ತಿಳಿಸುತ್ತೇನೆ ಎಂದರು.
ಇಂಧನ ಸಚಿವನಾಗಿದ್ದಾಗ ಮಾಡಿದ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಪ್ರಮಾಣಪತ್ರ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ 10 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತೇನೆ ಎಂದು ಬಿಜೆಪಿಯವರು ಭರವಸೆ ನೀಡಿದ್ದರು. ಈಡೇರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಚಿವ ನಿರಾಣಿ ಆರೋಪಿಸಿದಂತೆ ಯತ್ನಾಳರ ಚಾಲಕನ ಕೊಲೆ, ಯತ್ನಾಳ ಹೇಳಿದಂತೆ ಸಚಿವರನ್ನು ಪಿಂಪ್ ಎಂದು ಆರೋಪಿಸಿದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ರಾಜ್ಯ ನಾಯಕರಿಗೆ ಮತ ಕೇಳಲು ಮುಖವಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆ ತರುತ್ತಿದ್ದಾರೆ ಎಂದು ಟೀಕಿಸಿದರು.