ಚೆನ್ನೈ: 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಕೇಂದ್ರ ಸರ್ಕಾರದ ಕ್ರಮವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಂಡ ಸೋಲನ್ನು ಮುಚ್ಚಿಹಾಕುವ ಲೆಕ್ಕಾಚಾರದ ಕ್ರಮವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದು, 500 ಅನುಮಾನಗಳು, 1,000 ನಿಗೂಢಗಳು ಮತ್ತು 2,000 ಪ್ರಮಾದಗಳು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ದಯನೀಯ ವೈಫಲ್ಯವನ್ನು ಮುಚ್ಚಿಹಾಕಲು ಇದೊಂದು ತಂತ್ರ ಎಂದಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ ಸ್ಟಾಲಿನ್, ಬಿಜೆಪಿಯನ್ನು ದ್ರಾವಿಡ ಭೂದೃಶ್ಯದಿಂದ ನಿರ್ನಾಮ ಮಾಡಲಾಗಿದೆ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ನೋಟು ಅಮಾನ್ಯೀಕರಣದ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಒಂದು ದಿನ ಮೊದಲು ಸಂಸದೆ ಮತ್ತು ಡಿಎಂಕೆ ಉಪ ಕಾರ್ಯದರ್ಶಿ ಕನಿಮೊಳಿ ಅವರು 2,000 ರೂಪಾಯಿ ನೋಟಿನ ಫೊಟೋವನ್ನು ಪೋಸ್ಟ್ ಮಾಡಿ, ‘ಆತನೇ ಸೃಷ್ಟಿಸುವವನು, ಆತನೇ ನಾಶಪಡಿಸುವವನು’ ಎಂದು ಟ್ವೀಟ್ ಮಾಡಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು ಮತ್ತು ಅಸ್ತಿತ್ವದಲ್ಲಿರುವ ನೋಟುಗಳನ್ನು ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಇತರ ಕರೆನ್ಸಿ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.