ಮನೆ ರಾಷ್ಟ್ರೀಯ ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜ

ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜ

0

ನವದೆಹಲಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ ಗರ್ಭಗುಡಿಯ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜವನ್ನು ಹಾರಿಸಲು ತೀರ್ಮಾನಿಸಲಾಗಿದೆ. ನ.25 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಮೇಲ್ಭಾಗದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಧಾರ್ಮಿಕ ಸಮಿತಿಯ ಸದಸ್ಯರ ಮಹತ್ವದ ಸಭೆ ಜಾನಕಿ ಘಾಟ್‌ನ ವೈದೇಹಿ ಭವನದಲ್ಲಿ ನಡೆಯಿತು. ನವೆಂಬರ್ 25 ರಂದು ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದ ರೂಪುರೇಷೆಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಧಾರ್ಮಿಕ ಸಮಿತಿಯ ಸದಸ್ಯ ಗೋಪಾಲ್ ರಾವ್ ಹೇಳಿದರು.

191 ಅಡಿ ಎತ್ತರದ ರಾಮಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲು ನಿರ್ಧರಿಸಿದೆ. ಧ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿಯು ಒಮ್ಮತಕ್ಕೆ ಬಂದಿದೆ.

ದೀಪಾವಳಿ ಬಳಿಕ ಎಲ್ಲಾ ಅತಿಥಿಗಳಿಗೆ ಆಹ್ವಾನ ಪತ್ರಗಳನ್ನು ಕಳುಹಿಸಲಾಗುವುದು. ಎಂಟರಿಂದ ಹತ್ತು ಸಾವಿರ ಅತಿಥಿಗಳು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಖಜಾಂಚಿ ಗೋವಿಂದ್ ದೇವಗಿರಿ, ಸದಸ್ಯರಾದ ಡಾ. ಅನಿಲ್ ಮಿಶ್ರಾ, ಗೋಪಾಲ್ ರಾವ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

ದೀಪಾವಳಿ ಲಕ್ಷ ದೀಪೋತ್ಸಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಕೆಲಸಗಳು ಶುರುವಾಗಿವೆ. ಭಕ್ತರ ಅನುಕೂಲಕ್ಕಾಗಿ ಆಸನ ವ್ಯವಸ್ಥೆ, ಬೆಳಕು, ವಿಶ್ರಾಂತಿ ಕೊಠಡಿಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು, ಕುಡಿಯುವ ನೀರು ಮತ್ತು ರ‍್ಯಾಂಪ್‌ಗಳಂತಹ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ ಕೆಲಸಗಳು ಅ.15 ರೊಳಗೆ ಪೂರ್ಣಗೊಳ್ಳಲಿವೆ.