ಕಳೆದ ಶನಿವಾರ ರಾಜ್ಯದಾದ್ಯಂತ ನಡೆದ ಲೋಕ ಅದಾಲತ್ ನಲ್ಲಿ ಒಟ್ಟು 24,36,270 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 1,420 ಕೋಟಿ ಪರಿಹಾರ ಮೊತ್ತವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ಕೊಡಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್ ಮಂಗಳವಾರ ವಿವರಿಸಿದರು.
ಹೈಕೋರ್ಟ್ ನ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಹೈಕೋರ್ಟ್ ನ ಮೂರು ಪೀಠಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 1,012 ಪೀಠಗಳು ಅದಾಲತ್ ಗಾಗಿ ಕಾರ್ಯನಿರ್ವಹಿಸಿವೆ. ನ್ಯಾಯಾಲಯದಲ್ಲಿ ಬಾಕಿಯಿರುವ 2,14,925 ಪ್ರಕರಣಗಳು ಹಾಗೂ 22,21,345 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 24,36,270 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೇ, ಲೋಕ ಅದಾಲತ್ ನಿಂದ ಸಾರ್ವಜನಿಕರಿಗೆ ಯಾವುದೇ ವೆಚ್ಚವಿಲ್ಲದೆ ಪರಿಹಾರ ಲಭ್ಯವಾಗುತ್ತಿದೆ. ಜೊತೆಗೆ, ನ್ಯಾಯಾಲಯದ ಸಮಯವೂ ಉಳಿಯುತ್ತಿದೆ ಎಂದು ವಿವರಿಸಿದರು.
ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ ಸೋಮಶೇಖರ್ ಅವರು ಅದಾಲತ್ ನಲ್ಲಿ 1,305 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 255 ದಂಪತಿ ಒಂದಾಗಿದ್ದಾರೆ. ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 3,303 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಒಟ್ಟು 166 ಕೋಟಿ ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 9,269 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ₹373 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. 430 ಭೂಸ್ವಾಧೀನ ಪ್ರಕರಣಗಳಲ್ಲಿ ಇತ್ಯರ್ಥಪಡಿಸಿದ್ದು, ₹88 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ. 767 ಮೋಟಾರು ವಾಹನ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ₹48 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಇದಲ್ಲದೆ, ಇತರೆ 2,899 ಪ್ರಕರಣಗಳು ಇತ್ಯರ್ಥವಾಗಿದ್ದು ₹103 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಅಲ್ಲದೇ, 35 ರೇರಾ ಪ್ರಕರಣಗಳಲ್ಲಿ ₹7.40 ಕೋಟಿ ಪರಿಹಾರ, 95 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ ₹2 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಅದಾಲತ್ ನ ವಿಶೇಷ ಪ್ರಕರಣಗಳು
ಮೋಟಾರ್ ವಾಹನ ಪ್ರಕರಣವೊಂದರಲ್ಲಿ ₹51,46,820 ಪರಿಹಾರ, ಹಾಗೂ ಮತ್ತೊಂದು ಪ್ರಕರಣದಲ್ಲಿ ₹53 ಕೋಟಿ ಪರಿಹಾರ ವಿತರಣೆ.
ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಬಿ ವಿ ಮಂಜುನಾಥ್ ವಿರುದ್ಧದ ಪ್ರಕರಣದಲ್ಲಿ 6.85 ಕೋಟಿ ಪರಿಹಾರ, ಹಾಗೂ ಟಾಟಾ ಕ್ಯಾಪಿಟಲ್ ಫೈನಾನ್ಸ್ ಸರ್ವೀಸ್ ಲಿಮಿಟೆಡ್ ಮತ್ತು ಗಿರಿ ಸಹಜನ್ಯ ಪ್ರೋಜೆಕ್ಟ್ ವಿರುದ್ಧದ ಪ್ರಕರಣದಲ್ಲಿ ₹3.35 ಕೋಟಿ ಪರಿಹಾರ, ಟಾಟಾ ಕ್ಯಾಪಿಟಲ್ ಸರ್ವೀಸ್ ಮತ್ತು ವೆಂಕಟೇಶ್ವರ ಕ್ರಷರ್ಸ್ ನಡುವಿನ ಪ್ರಕರಣದಲ್ಲಿ ₹3.35 ಕೋಟಿ ಪರಿಹಾರ ನೀಡಿ ಇತ್ಯರ್ಥ ಪಡಿಸಲಾಗಿದೆ.
ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ ಮತ್ತು ಜೆ.ಲಾಲ್ ಅಂಡ್ ಸನ್ಸ್ ಮತ್ತಿತರರು ಪ್ರಕರಣದಲ್ಲಿ ₹2.53 ಕೋಟಿ ಪರಿಹಾರ.
ಟಾಟಾ ಕ್ಯಾಪಿಟಲ್ ಫೈನಾನ್ಸ್ ಸರ್ವೀಸ್ ಲಿಮಿಟೆಡ್ ಹಾಗೂ ಶ್ಯಾನ್ ಬಾಗ್ ವಿನಾಯಕ್ ಟಿಂಬರ್ ಡಿಪೋ ವಿರುದ್ಧದ ಚೆಕ್ ಬೌನ್ಸ್ ಪ್ರಕರಣದಲ್ಲಿ ₹2.53 ಕೋಟಿ ಪರಿಹಾರ ವಿತರಣೆ ಮಾಡಿ ಪ್ರಕರಣ ಇತ್ಯರ್ಥಪಡಿಸಲಾಗಿದೆ.