ಬೆಂಗಳೂರು(Bengaluru): ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಉದ್ಯಮಿಗೆ ಕರೆ ಮಾಡಿದ ಸೈಬರ್ ಕಳ್ಳರು ಪಾನ್‌ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ ಎಂದು ನಂಬಿಸಿ ಒಟಿಪಿ ಪಡೆದು 3.97 ಲಕ್ಷ ರೂ. ವಂಚಿಸಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಕುಮಾರಕೃಪಾ ರಸ್ತೆಯ ದಿನೇಶ್ ಶೆಟ್ಟಿ (64) ವಂಚನೆಗೊಳಗಾದ ಉದ್ಯಮಿ.
ಅ.4ರಂದು ಮಧ್ಯಾಹ್ನ ದಿನೇಶ್ ಶೆಟ್ಟಿಗೆ ಅಪರಿಚಿತನಬ್ಬ ಖಾಸಗಿ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ್ದ. ನಂತರ ನಿಮ್ಮ ಪಾನ್‌ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ ಎಂದು ನಂಬಿಸಿದ್ದ. ನಂತರ ಎನಿ ಡೆಸ್ಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ತಿಳಿಸಿ ಒಟಿಪಿಯನ್ನು ಕೇಳಿದ್ದ. ಆತನ ಮಾತನ್ನು ನಂಬಿದ ದಿನೇಶ್ ಶೆಟ್ಟಿ ಮೊಬೈಲ್‌ಗೆ ಬಂದ ಒಟಿಪಿ ನಂಬರ್ ಹೇಳಿದ್ದರು.
ಇದಾದ ಬಳಿಕ ಕೆಲ ಹೊತ್ತಿನಲ್ಲಿ ದಿನೇಶ್ ಶೆಟ್ಟಿ ಅವರ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಒಟ್ಟು 3.97 ಲಕ್ಷ ರೂ. ಕಡಿತಗೊಂಡಿತ್ತು. ಹಣ ಕಡಿತಗೊಂಡ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಾಗ ಆತಂಕಗೊಂಡ ದಿನೇಶ್ ಶೆಟ್ಟಿ ಈ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಸೈಬರ್ ಕಳ್ಳರು ಕನ್ನ ಹಾಕಿರುವುದು ಗೊತ್ತಾಗಿದೆ.