ಮನೆ ಕಾನೂನು ವೈದ್ಯಕೀಯ ವಿಮಾ ಮೊತ್ತ ಪಾವತಿ ಮಾಡದೇ ನಿರ್ಲಕ್ಷ್ಯವಹಿಸದ ಖಾಸಗಿ ವಿಮಾ ಸಂಸ್ಥೆಗೆ 3 ಲಕ್ಷ ರೂ....

ವೈದ್ಯಕೀಯ ವಿಮಾ ಮೊತ್ತ ಪಾವತಿ ಮಾಡದೇ ನಿರ್ಲಕ್ಷ್ಯವಹಿಸದ ಖಾಸಗಿ ವಿಮಾ ಸಂಸ್ಥೆಗೆ 3 ಲಕ್ಷ ರೂ. ದಂಡ

0

ಧಾರವಾಡ: ಆರೋಗ್ಯ ವಿಮೆ ಮಾಡಿಸಿಕೊಂಡಿದ್ದರೂ ಅದನ್ನು ಕ್ಲೇಮ್ ಮಾಡಿದಾಗ ವಿಮೆ ಹಣ ಕೊಡಲು ನಿರ್ಲಕ್ಷ್ಯ ವಹಿಸಿದ ಖಾಸಗಿ ವಿಮಾ ಕಂಪನಿಗೆ ಧಾರವಾಡ ಗ್ರಾಹಕರ ಆಯೋಗ 3 ಲಕ್ಷ ರೂ. ದಂಡ ವಿಧಿಸಿದೆ.

ಹುಬ್ಬಳ್ಳಿಯ ನವನಗರದ ನಿವಾಸಿ ರುದ್ರಗೌಡ ಪಾಟೀಲ ಅವರು ಖಾಸಗಿ ಕಂಪನಿಯೊಂದರ ನೌಕರ. ಅವರು ವರ್ಷಗಳ ಹಿಂದೆ, ಜನರಲ್ ಇನ್ಸೂರೆನ್ಸ್ ಕಂಪನಿಯಿಂದ 3 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಮತ್ತು ಆರೋಗ್ಯದ ವಿಮೆ ಪಾಲಿಸಿಯನ್ನು ಮಾಡಿಸಿದ್ದರು. ಪಾಲಿಸಿ ಚಾಲ್ತಿಯಲ್ಲಿರುವಾಗಲೇ ದೂರುದಾರರಿಗೆ ಹೃದಯ ಸಂಬಂಧಿಸಿದ ತೊಂದರೆಯಾಗಿ ಅವರು ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ರೂ.3,85,250/- ಹಣವನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಪಡೆದಿದ್ದರು.

ಚಿಕಿತ್ಸಾ ವೆಚ್ಚದ ಹಣದ ಮರುಪಾವತಿಗಾಗಿ ರುದ್ರಗೌಡ ಪಾಟೀಲ ಅವರು, ತಾವು ವಿಮೆ ಮಾಡಿಸಿರುವ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯ ಮೇಲೆ ವಿಮಾ ಕಂಪನಿಯವರು ಯಾವುದೇ ಆದೇಶ ಮಾಡದೇ ಪೆಂಡಿಂಗ್ ಇಟ್ಟಿದ್ದರು. ಪದೇ ಪದೇ ವಿಚಾರಿಸಿದಾಗಲೂ ವಿಮೆ ಹಣ ಬಿಡುಗಡೆಯ ಬಗ್ಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ವಿಮೆ ಕಂಪನಿಯವರ ವರ್ತನೆಯಿಂದ ಬೇಸತ್ತ ರುದ್ರಗೌಡ ಅವರು, ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ದೂರುದಾರರು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದು ಅವರ ವಿಮಾ ಪಾಲಿಸಿ ಚಾಲ್ತಿಯಿದ್ದಾಗ, ವೈದ್ಯಕೀಯ ವೆಚ್ಚದ ಹಣವನ್ನು ದೂರುದಾರನಿಗೆ ಅವರಿಗೆ ಅವಶ್ಯಕತೆಯಿದ್ದಾಗ ನೀಡದಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು, ಸೇವೆ ವಿಳಂಬ ಮಾಡಿದ ಕಂಪನಿಗೆ ದಂಡ ವಿಧಿಸಿದ್ದಾರೆ.

ದೂರುದಾರರು ತಮ್ಮ ಫಿರ್ಯಾದಿಯಲ್ಲಿ ಶಸ್ತ್ರಚಿಕಿತ್ಸೆಗಾಗಿ ರೂ.3,85,250/-ಗಳನ್ನು ಖರ್ಚು ಮಾಡಿದ್ದರು. ಆದರೆ ಅವರು ಮಾಡಿಸಿದಂತಹ ವಿಮಾ ಪಾಲಸಿಯಲ್ಲಿ ರೂ.3 ಲಕ್ಷದವರೆಗೆ ಕ್ಲೇಮ್ ಮೊತ್ತ ಇದ್ದುದರಿಂದ ದೂರುದಾರನಿಗೆ ರೂ.3ಲಕ್ಷ ವೈದ್ಯಕೀಯ ವೆಚ್ಚದ ಹಣ ನೀಡುವಂತೆ ವಿಮಾ ಕಂಪನಿಯವರಿಗೆ ನ್ಯಾಯಾಲಯ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಪರಿಹಾರ ರೂಪವಾಗಿ ಕೊಡಬೇಕು ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.

ಹಿಂದಿನ ಲೇಖನಭಾರತದ ಗಡಿಯೊಳಗೆ ನುಸುಳಿದ ಡ್ರೋನ್ ಹೊಡೆದುರುಳಿಸಿದ ಬಿಎಸ್’ಎಫ್ ಪಡೆ
ಮುಂದಿನ ಲೇಖನಕೆಲವು ಭಿನ್ನಾಭಿಪ್ರಾಯವನ್ನು ಅಸಮಾಧಾನ ಎಂದು ಅರ್ಥೈಸುವುದು ಸರಿಯಲ್ಲ: ಡಾ.ಜಿ.ಪರಮೇಶ್ವರ್.