ಬೆಂಗಳೂರು: ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ರೋಬೋಟಿಕ್ ಎನ್-ಬ್ಲಾಕ್ ವಿಧಾನದ ಮೂಲಕ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡಗಳನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಇದು ವಿಶ್ವದಲ್ಲೇ ಅತ್ಯಂತ ಅಪರೂಪದ ಪ್ರಕರಣ ಎಂದು ವೈದ್ಯರು ಸೋಮವಾರ ಹೇಳಿದ್ದಾರೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಡಾ.ಶ್ರೀಹರ್ಷ ಹರಿನಾಥ್ ಮತ್ತು ಡಾ.ಮೋಹನ್ ಕೇಶವಮೂರ್ತಿ ನೇತೃತ್ವದ ವೈದ್ಯರ ತಂಡ ಈ ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿತು.
ಈ ಕುರಿತು ಮಾತನಾಡಿದ ಡಾ. ಕೇಶವಮೂರ್ತಿ, 30 ವರ್ಷದ ವ್ಯಕ್ತಿಯು ದೀರ್ಘಕಾಲದಿಂದ ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿ, ಹಿಮೋಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಅವರಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿತ್ತು.
13 ತಿಂಗಳ ಮಗುವೊಂದು ಉಸಿರುಗಟ್ಟಿ ಸಾವಪ್ಪಿದ್ದರಿಂದ ಅವರ ಪೋಷಕರ ಒಪ್ಪಿಗೆ ಮೇರೆಗೆ ಆ ಸಣ್ಣ ಮಗುವಿನ ಕಿಡ್ನಿಯನ್ನು ದಾನವಾಗಿ ಪಡೆಯಲಾಯಿತು. ಈ ಮಗು ಕೇವಲ 7.3 ಕೆಜಿ ಹೊಂದಿತ್ತು. 30 ವರ್ಷದ ಈ ವ್ಯಕ್ತಿಯೂ 50 ಕೆಜಿ ತೂಕವುಳ್ಳವರಾಗಿದ್ದರು. ಇವರಿಗೆ ಮಗುವಿನ ಕಿಡ್ನಿ ಕಸಿ ಮಾಡುವುದು ಸವಾಲಿನ ಕೆಲಸವೇ ಸರಿ. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿ, ರೋಬೋಟಿಕ್ ಎನ್-ಬ್ಲಾಕ್ ಮೂಲಕ ಕಿಡ್ನಿಯನ್ನು ಕಸಿ ಮಾಡಲಾಯಿತು ಎಂದು ಹೇಳಿದ್ದಾರೆ.
ರೋಬೋಟಿಕ್ ಎನ್-ಬ್ಲಾಕ್, ಈ ನವೀನ ತಂತ್ರವು ಕಸಿ ಮಾಡಿದ ಮೂತ್ರಪಿಂಡಗಳನ್ನು ಸ್ವೀಕರಿಸುವವರ ದೇಹದ ತೂಕಕ್ಕೆ ಅನುಗುಣವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.ಈ ಶಸ್ತ್ರಚಿಕಿತ್ಸೆಯು ನಾಲ್ಕು ಗಂಟೆಗಳ ವರೆಗೆ ಸುದೀರ್ಘವಾಗಿ ನಡೆದಿದೆ.
ಶಸ್ತ್ರಚಿಕಿತ್ಸೆಯ ನಂತರ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ, ಆರೈಕೆ ಮಾಡಲಾಗುತ್ತಿದೆ. 12 ದಿನಗಳ ಬಳಿಕ ಡಿಸ್ಚರ್ಜ್ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಮೂತ್ರಪಿಂಡ ಕಸಿಯಲ್ಲಿ ರೋಬೋಟಿಕ್ ಅಳವಡಿಕೆಯಿಂದ ಯಾವುದೇ ಕಷ್ಟಕರ ಶಸ್ತ್ರಚಿಕಿತ್ಸೆಯಾದರೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ ಸಣ್ಣ ಮಗುವಿನ ಕಿಡ್ನಿಯನ್ನು ದೊಡ್ಡವರಿಗೆ ಅಳವಡಿಸುವುದು ಒಂದು ಸವಾಲು ಎಂದು ಹೇಳಿದ್ದಾರೆ.