ಮನೆ ರಾಜ್ಯ ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಸದ್ಯದಲ್ಲೇ ಹಸ್ತಾಂತರ

ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಸದ್ಯದಲ್ಲೇ ಹಸ್ತಾಂತರ

ಕಾನೂನು ತೊಡಕು ನಿವಾರಣೆ: ಸಚಿವ ಎಂ ಬಿ ಪಾಟೀಲ

0

Join Our Whatsapp Group

ಬೆಂಗಳೂರು: ಐಫೋನ್ ತಯಾರಿಸುವ ಬಹುರಾಷ್ಟ್ರೀಯ ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಭೂಮಿ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಶೀಘ್ರವೇ ಕಂಪನಿಗೆ ಜಾಗ ಬಿಟ್ಟುಕೊಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.

ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ  ನೀಡಿದರು.

ಕಂಪನಿಗೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಹೋಬಳಿಗೆ ಸೇರಿದ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐ ಟಿ ಐ ಆರ್) ದಲ್ಲಿ 300 ಎಕರೆ ಜಾಗ ಕೊಡಲಾಗುತ್ತದೆ. ಕಂಪನಿ ಸುಮಾರು 8,500 ಕೋಟಿ ರೂ. ಹೂಡಿ, ತಯಾರಿಕಾ ಘಟಕ ಸ್ಥಾಪಿಸಲಿದೆ. ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಂಪನಿಯು ನಿರ್ಮಾಣ ಕಾಮಗಾರಿ ಶುರು ಮಾಡಬಹುದು. ನಿರೀಕ್ಷೆ ಪ್ರಕಾರ ಮುಂದಿನ ವರ್ಷ ಉತ್ಪಾದನೆ ಕೂಡ ಆರಂಭಿಸಲಿದೆ. 50 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಈ ಯೋಜನೆಯ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿದೆ ಎಂದು ವಿವರಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 3 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇವು ಸುಮಾರು 110 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 1,450ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದರು.

ಕೈಗಾರಿಕಾ ನೀತಿ (2020-25), ಕರ್ನಾಟಕ ಏರೋಸ್ಪೇಸ್ & ಡಿಫೆನ್ಸ್ ನೀತಿ (2022-27) ಮತ್ತು ವಿದ್ಯುತ್‌ ಚಾಲಿತ ವಾಹನ & ಇಂಧನ ಸಂಗ್ರಹಣೆ ನೀತಿ (2017)ಯಡಿ ನಿಗದಿಗೊಳಿಸಿರುವ ಉತ್ತೇಜಕ ಕ್ರಮಗಳು ಈ ವಲಯದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಲು ಪೂರಕವಾಗಿವೆ ಎಂದು ಪಾಟೀಲ ಅಭಿಪ್ರಾಯಪಟ್ಟರು.