ನವದೆಹಲಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ300 ಕೋಟಿ ರೂ. ಮೌಲ್ಯದ ಅಕ್ರಮ ಆರೋಪ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ.
ದೇಶಾದ್ಯಂತ ಹಾಗೂ ವಿದೇಶದಲ್ಲೂ ಮೈಸೂರು ಮೂಲದ ಕೆ.ಎಸ್.ಓ.ಯು ನಿಯಮ ಉಲ್ಲಂಘಿಸಿ ಸಹಯೋಗ ಸಂಸ್ಥೆಗಳನ್ನು ತೆರೆದಿತ್ತು ಎಂದು ಉಲ್ಲೇಖಿಸಲಾಗಿದೆ.
ಈ ಸಹಯೋಗ ಸಂಸ್ಥೆಗಳು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಸೇರಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಕೆ.ಎಸ್.ಓ.ಯು ಗೆ ಭರಿಸುತ್ತಿದ್ದವು. ಆದರೆ ಆಡಿಟ್ ನಲ್ಲಿ, 2013-14 ಮತ್ತು 2014-15 ಹಣಕಾಸು ವರ್ಷದಲ್ಲಿ ಈ ಸಹಯೋಗ ಸಂಸ್ಥೆಗಳು ಭರಿಸಿರುವ 50 ಕೋಟಿ ರೂ. ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಅಡಿಟ್ ನಲ್ಲಿ, 2009-10 ರಿಂದ 2012-13 ಹಣಕಾಸು ವರ್ಷಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕದಲ್ಲಿ 250 ಕೋಟಿ ರೂ. ಕಾಣೆಯಾಗಿದೆ ಇದಕ್ಕೆ ಸೂಕ್ತ ದಾಖಲೆಗಳಿಲ್ಲ.
ಒಟ್ಟು 300 ಕೋಟಿ ರೂ.ಗಳ ಅಕ್ರಮ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೆ ಎಸ್ ಓ ಯು ನಿರ್ದೇಶಕರ ಮಂಡಳಿಯು ಸಿಬಿಐ ತನಿಖೆಗೆ ಒತ್ತಾಯಿಸಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ.