ಮನೆ ಅಪರಾಧ ಹಳೇ 2 ರೂ ನಾಣ್ಯ ಕೊಟ್ಟರೆ 31 ಲಕ್ಷ ರೂ. ಕೊಡುವುದಾಗಿ ವೃದ್ಧನಿಗೆ ಸೈಬರ್ ಅಪರಾಧಿಗಳಿಂದ...

ಹಳೇ 2 ರೂ ನಾಣ್ಯ ಕೊಟ್ಟರೆ 31 ಲಕ್ಷ ರೂ. ಕೊಡುವುದಾಗಿ ವೃದ್ಧನಿಗೆ ಸೈಬರ್ ಅಪರಾಧಿಗಳಿಂದ ವಂಚನೆ

0

ಬೆಂಗಳೂರು: ನಿಮ್ಮ ಬಳಿ ಹಳೆಯ 2 ರೂ ನಾಣ್ಯಗಳು ಅಥವಾ 5 ರೂ. ನಾಣ್ಯಗಳಿದ್ದರೆ, ಅದಕ್ಕೆ ಬದಲಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಆಮಿಷವೊಡ್ಡಿ ಸೈಬರ್ ಅಪರಾಧಿಗಳು ಸೃಷ್ಟಿಸಿದ್ದ ನಕಲಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ವೀಡಿಯೋ ವೀಕ್ಷಿಸಿದ ವೃದ್ಧರೊಬ್ಬರು ದುರಾಸೆಗೆ ಬಲಿಯಾಗಿ ತನ್ನ ಬಳಿಯಿದ್ದದ್ದನ್ನೆಲ್ಲ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಹಲಸೂರಿನಲ್ಲಿ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ ವೃದ್ಧ ವಿಡಿಯೋದಲ್ಲಿರುವ ಫೋನ್ ನಂಬರ್ ಗೆ ಕರೆ ಮಾಡಿದ್ದಾನೆ. ತನ್ನ ಬಳಿ 2 ರೂಪಾಯಿ, 5 ರೂಪಾಯಿ ಇದೆ ಎಂದು ತಿಳಿಸಿದ್ದಾನೆ. ವೃದ್ಧನಿಂದ ಕರೆ ಸ್ವೀಕರಿಸಿದ ನಂತರ, ಸೈಬರ್ ಅಪರಾಧಿಗಳು ಇದು ಅಸಲಿ ವ್ಯವಹಾರವೆಂದು ನಂಬಿಸಿದ್ದಾರೆ. ವಿಡಿಯೋ ಕಾಲ್ ಮಾಡಿ ಕೆಲವು ಹಳೆಯ ನಾಣ್ಯಗಳನ್ನು ಎಣಿಸುವ ದೃಶ್ಯಗಳನ್ನು ತೋರಿಸಿದ್ದಾರೆ. ಇದೆ ಮಾದರಿ ನಾಣ್ಯಗಳ ಫೋಟೋ ತೆಗೆದು ಕಳುಹಿಸುವಂತೆ ವೃದ್ಧನಿಗೆ ಸೂಚಿಸಿದ್ದಾರೆ. ಅದರಂತೆ 2 ಮತ್ತು 5 ರೂ ನಾಣ್ಯಗಳು ಮತ್ತು 1 ರೂ ನಾಣ್ಯಗಳ ಫೋಟೋ ತೆಗೆದು ಕಳುಹಿಸಿದ್ದಾರೆ. ಈ ಹಳೆಯ ನಾಣ್ಯಗಳು 1980-1990ರ ಅವಧಿಯಲ್ಲಿ ಚಲಾವಣೆಯಲ್ಲಿದ್ದವು. ಈ ಹಳೆಯ ನಾಣ್ಯಗಳ ಮೇಲೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಆಕೃತಿಯ ಜೊತೆಗೆ ಭಾರತದ ನಕ್ಷೆಯೂ ಇತ್ತು. ಅದನ್ನು ಪರಿವೀಕ್ಷಿಸುವಂತೆ ಮಾಡಿದ ವಂಚಕರು ಆ ಹಳೆಯ ನಾಣ್ಯಗಳು 31 ಲಕ್ಷ ರೂ. ಬಾಳುತ್ತದೆ ಎಂದಿದ್ದಾರೆ.

 ಸ್ವಲ್ಪ ಸಮಯದ ನಂತರ, ಸೈಬರ್ ಅಪರಾಧಿಗಳು ವಿವಿಧ ಹೆಸರುಗಳು, ತೆರಿಗೆ ನಿಯಮಗಳನ್ನು ಉಲ್ಲೇಖಿಸುತ್ತಾ ವೃದ್ಧನ ಖಾತೆಯಿಂದ 2.3 ಲಕ್ಷ ರೂ. ಎಗರಿಸಿದ್ದಾರೆ. ಆದರೆ ಅಪರಾಧಿಗಳು ಇನ್ನೂ ಹೆಚ್ಚಿನ ಹಣ ಬೇಕಾದೀತು ಎಂದು ಕೇಳಿದಾಗ ವೃದ್ಧನಿಗೆ ಅನುಮಾನ ಬಂದಿದೆ. ವಂಚಕರು ಕೇಳಿದಷ್ಟು ಹಣ ಕಳುಹಿಸಲು ಆಗುವುದಿಲ್ಲ ಎಂದು ವೃದ್ದ ಹೇಳಿದ್ದಾರೆ. ಸಂತ್ರಸ್ತನಿಂದ ಹಣ ಪಡೆದ ನಂತರ ಆರೋಪಿಗಳು ಅಲರ್ಟ್ ಆಗಿದ್ದಾರೆ.

ಆದರೂ ಅಷ್ಟಕ್ಕೆ ನಿಲ್ಲದೆ ಮುಂಬೈ ಪೊಲೀಸರ ಹೆಸರಿನಲ್ಲಿ ನಕಲಿ ಕರೆ ಮಾಡಿದ್ದಾರೆ. ತಾವು ಮುಂಬೈ ಪೊಲೀಸ್ ಅಧಿಕಾರಿಗಳು, ನಿಮ್ಮ ಮೇಲೆ ಮನಿ ಲಾಂಡ್ರಿಂಗ್​ ಕೇಸ್​ ಇದೆ ಎಂದು ಸಂತ್ರಸ್ತ ವೃದ್ಧನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ನಕಲಿ ವಿಡಿಯೋ ಕರೆಯನ್ನೂ ಮಾಡಿ, ಹೆದರಿಸಿದ್ದಾರೆ.

ಆಗ ವೃದ್ಧ ಹಲಸೂರು ಪೊಲೀಸರ ಮೊರೆ ಹೋಗಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿ ಹಣ ಕಳೆದುಕೊಂಡಿದ್ದು, ನೆರವು ನೀಡಿ ಎಂದು ಮನವಿ ಮಾಡಿದ್ದಾರೆ.

ಸಂತ್ರಸ್ತ ವ್ಯಕ್ತಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಆದರೆ ಮರುದಿನವೂ ಮತ್ತೆ ಸಂತ್ರಸ್ತ ವೃದ್ಧನಿಗೆ ಕರೆ ಮಾಡಿದ ಸೈಬರ್ ಕ್ರಿಮಿನಲ್‌ಗಳು ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಎಂದು ಹೇಳುತ್ತಾ, ಸ್ಥಳೀಯ ಪೊಲೀಸರಿಗೆ ಹೆದರುವುದಿಲ್ಲ. ಜನವರಿ 20ರೊಳಗೆ ನಿಮ್ಮನ್ನು  ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಪೊಲೀಸರು ಐಪಿಸಿ 420 ಅಡಿ ನತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.