ಪೋರಬಂದರ್: ಭದ್ರತಾ ಸಿಬ್ಬಂದಿ ಮತ್ತು ಮಾದಕ ವಸ್ತು ತಡೆ ಸಂಸ್ಥೆಗಳ ಅಧಿಕಾರಿಗಳು ಬುಧವಾರ ಗುಜರಾತ್ ರಾಜ್ಯದ ಅರಬ್ಬಿ ಸಮುದ್ರದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ದಾಖಲೆಯ 3,300 ಕೆ.ಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಈವರೆಗೂ ಸಮುದ್ರದಲ್ಲಿ ವಶಪಡಿಸಿಕೊಂಡ ಅತ್ಯಧಿಕ ಪ್ರಮಾಣದ ಡ್ರಗ್ಸ್ ಇದಾಗಿದ್ದು, ಕಳ್ಳ ಸಾಗಣೆ ಮಾಡುತ್ತಿದ್ದ ಐವರು ವಿದೇಶಿಗರನ್ನು ಬಂಧಿಸಲಾಗಿದೆ.
ನೌಕಾಪಡೆ, ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಮತ್ತು ಗುಜರಾತ್ ಪೊಲೀಸರು ನಡೆಸಿರುವ ಕಾರ್ಯಾಚರಣೆಯು ಐತಿಹಾಸಿಕ ಯಶಸ್ಸಾಗಿದೆ. ದೇಶವನ್ನು ಮಾದಕ ವಸ್ತು ಮುಕ್ತವನ್ನಾಗಿಸಲು ನಮ್ಮ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ, ಅರಬ್ಬಿ ಸಮುದ್ರದ ಅಂತರರಾಷ್ಟ್ರೀಯ ಜಲ ಗಡಿ ಉದ್ದಕ್ಕೂ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಣ್ಗಾವಲಿಗಾಗಿ ದೀರ್ಘಶ್ರೇಣಿಯ ಪಿ8ಐ ವಿಚಕ್ಷಣಾ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿತ್ತು. ಯುದ್ಧನೌಕೆ ಮತ್ತು ಹೆಲಿಕಾಪ್ಟರ್ ಜಂಟಿ ಕಾರ್ಯಾಚಾರಣೆಯಲ್ಲಿ 3,300 ಕೆ.ಜಿ(3,089 ಕೆ.ಜಿ ಚರಸ್, 158 ಮೆಥಾಂಫೆಟಮಿನ್ ಮತ್ತು 25 ಕೆ.ಜಿ ಮಾರ್ಫಿನ್ ) ಮಾದಕವಸ್ತು ಸಾಗಿಸುತ್ತಿದ್ದ ಹಡಗನ್ನು ಪತ್ತೆ ಮಾಡಲಾಯಿತು ಎಂದು ನೌಕಾಪಡೆ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ. ಬಂಧಿತರು ಇರಾನ್ ಅಥವಾ ಪಾಕಿಸ್ತಾನಕ್ಕೆ ಸೇರಿದವರಿರಬಹುದು ಎಂದು ಶಂಕಿಸಲಾಗಿದೆ.