ಮೈಸೂರು(Mysuru): ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು ₹34.50 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ದಸರಾ ಸಿದ್ಧತಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅರಮನೆ ಮಂಡಳಿಯಿಂದ ₹5 ಕೋಟಿ, ಮುಡಾದಿಂದ ₹10 ಕೋಟಿ ವ್ಯಯಿಸಲಾಗುತ್ತಿದೆ. ಸರ್ಕಾರದಿಂದ ₹15 ಕೋಟಿ ದೊರೆಯುತ್ತಿದೆ. ಇದಲ್ಲದೆ, ಸೆಸ್ಕ್‌ಗೆ ವಿದ್ಯುತ್ ದೀಪಾಲಂಕಾರಕ್ಕಾಗಿ ₹4.50 ಕೋಟಿ ನೀಡಲಾಗಿದೆ. ಹಣವನ್ನು ಉಪ ಸಮಿತಿಗಳಿಗೆ ಹಂಚಲಾಗಿದೆ. ಕಾಮಗಾರಿಗಳಿಗೆ 4 ಜಿ ವಿನಾಯಿತಿ ಕೊಡಲಾಗಿದೆ. ಇಷ್ಟು ಹಣದಲ್ಲೇ ಉತ್ಸವ ಮುಗಿಸಲು ಕ್ರಮ ವಹಿಸಲಾಗಿದೆ. ಉತ್ಸವ ಮುಗಿದ ಕೆಲವೇ ದಿನಗಳಲ್ಲಿ ಖರ್ಚು–ವೆಚ್ಚದ ಲೆಕ್ಕ ಕೊಡಲಾಗುತ್ತದೆ ಎಂದು ಹೇಳಿದರು.
ಪಾಸ್ ಗೊಂದಲವಾಗದಂತೆ ಕ್ರಮ: ಪಾಸ್ ವಿಷಯದಲ್ಲಿ ಗೊಂದಲ ಹಾಗೂ ಗಲಾಟೆ ಆಗದಂತೆ ನೋಡಿಕೊಳ್ಳಲಾಗುವುದು. ಈ ಬಾರಿಯೂ ಗೋಲ್ಡ್ ಕಾರ್ಡ್ ಇರಲಿದೆ. ಅರಮನೆ ಆವರಣದಲ್ಲಿ ಜಂಬೂಸವಾರಿ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಣೆಗೆ ಆಸನಗಳಿರುವಷ್ಟು ಮಂದಿಗೆ ಮಾತ್ರ ಪ್ರವೇಶವಿರಲಿದೆ ಎಂದು ಪ್ರತಿಕ್ರಿಯಿಸಿದರು.
ಸೆ.26ರಂದು ಬೆಳಿಗ್ಗೆ 9.45ರಿಂದ 10.04ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ಪಾಲ್ಗೊಳ್ಳುವುದರಿಂದ ಭದ್ರತೆ ಹೆಚ್ಚಿರುತ್ತಾದ್ದರಿಂದ 2ಸಾವಿರ ಮಂದಿಗಷ್ಟೆ ಪಾಲ್ಗೊಳ್ಳಲು ಅವಕಾಶವಿರಲಿದೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಶಿಷ್ಟಾಚಾರದಂತೆ 49 ಮಂದಿಗೆ ಅವಕಾಶ ಇರುವುದಿಲ್ಲ. ರಾಷ್ಟ್ರಪತಿ ಕಚೇರಿಯಿಂದ ಬರುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು. ವೇದಿಕೆಯಲ್ಲಿ ಯಾರ‍್ಯಾರಿಗೆ ಆಸನ ಕಲ್ಪಿಸಬೇಕು ಎಂಬ ಬಗ್ಗೆ ಜಿಲ್ಲಾಡಳಿತದಿಂದ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ’ ಎಂದು ತಿಳಿಸಿದರು.
ಅಧಿಕಾರೇತರರ ನೇಮಕದ ಬಗ್ಗೆ ಚರ್ಚಿಸಿಲ್ಲ: ‘ಉಪ ಸಮಿತಿಗಳಿಗೆ ಅಧಿಕಾರೇತರ ಅಧ್ಯಕ್ಷರು, ಸದಸ್ಯರನ್ನು ನೇಮಿಸುವ ಕುರಿತು ಯೋಚಿಸಿಲ್ಲ. ಯಾರೂ ಮನವಿ ಮಾಡಿಲ್ಲ; ಇಚ್ಛೆಯನ್ನೂ ವ್ಯಕ್ತಪಡಿಸಿಲ್ಲ’ ಎಂದು ಹೇಳಿದರು.
ಉದ್ಘಾಟನೆಯ ಆಹ್ವಾನ ಪತ್ರಿಕೆಯನ್ನು ಪ್ರತಿ ವರ್ಷ ಕನ್ನಡದಲ್ಲಿ ಮುದ್ರಿಸುವುದು ವಾಡಿಕೆ. ಈ ಬಾರಿ ರಾಷ್ಟ್ರಪತಿಯವರ ಮಾಹಿತಿಗಾಗಿ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುವುದು. ಶೀಘ್ರದಲ್ಲೇ ದೆಹಲಿಗೆ ಹೋಗಿ ಅಧಿಕೃತವಾಗಿ ಅವರಿಗೆ ಆಮಂತ್ರಣ ನೀಡಲಾಗುವುದು ಎಂದು ಹೇಳಿದರು.
900 ಅರ್ಜಿಗಳು: ಅ.26ರಂದು ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ.3ರವರೆಗೆ ನಡೆಯಲಿದೆ. 900 ಅರ್ಜಿಗಳು ಬಂದಿದ್ದು, ಅದರಲ್ಲಿ 280 ಕಾರ್ಯಕ್ರಮಗಳಿಗೆ ಅವಕಾಶ ಕೊಡಲಾಗುತ್ತದೆ. ಸಂಜೆ 6ರಿಂದ 10ರವರೆಗೆ, ತಲಾ 1 ಗಂಟೆಯಂತೆ 4 ಕಾರ್ಯಕ್ರಮಗಳಿರಲಿವೆ. 3 ವರ್ಷದಿಂದ ಪಾಲ್ಗೊಂಡಿಲ್ಲದವರಿಗೆ, ಸ್ಥಳೀಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ವಿವರಿಸಿದರು.
ರೈತ ದಸರಾ ಸೆ.23ರಿಂದ 25ವರೆಗೆ ಇರಲಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಕ್ರೀಡೆಯನ್ನು ಮೂರು ದಿನ ನಡೆಸಲಾಗುತ್ತದೆ. ಪಶುಸಂಗೋಪನಾ ಸಚಿವರನ್ನು ಆಹ್ವಾನಿಸಲಾಗಿದೆ. ಕವಿಗೋಷ್ಠಿಯು ಈ ಬಾರಿ 4 ದಿನ ನಡೆಯಲಿದೆ. ಸೆ.26ರಿಂದ 7 ದಿನಗಳವರೆಗೆ 7 ಕಡೆಗಳಲ್ಲಿ ಯೋಗ ದಸರಾ ನಡೆಯಲಿದ್ದು, ಯೋಗ ಗುರುಗಳನ್ನು ಸನ್ಮಾನಿಸಲಾಗುತ್ತದೆ. ಸೆ.26ರಿಂದ 10 ದಿನಗಳವರೆಗೆ ಆಹಾರ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.
ದೀಪಾಲಂಕಾರಕ್ಕೆ ₹4.50 ಕೋಟಿ: 124 ಕಿ.ಮೀ. ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರವಿರಲಿದೆ. 96 ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸಂಸತ್ತಿನ ಭವನ ಹಾಗೂ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರ ಪ್ರತಿರೂಪಗಳನ್ನು ದೀಪಗಳಲ್ಲಿ ಮಾಡಲಾಗುತ್ತದೆ. 23 ಕಡೆಗಳಲ್ಲಿ ದಸರೆಗೆ ಸ್ವಾಗತ ಫಲಕಗಳಿರಲಿವೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ 22 ಅಡಿ ಎತ್ತರದಲ್ಲಿ ದೀಪಾಲಂಕಾರವಿರಲಿದೆ. ಇದಕ್ಕಾಗಿ ₹4.50 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದರು.
ಅಪ್ಪು ಹಾಡುಗಳಿಗೆ ಒಂದು ದಿನ ಮೀಸಲು: ಸೆ.27ರಿಂದ 7 ದಿನಗಳವರೆಗೆ ಯುವ ದಸರಾ ನಡೆಯಲಿದೆ. ಖ್ಯಾತ ಗಾಯಕರು ಪಾಲ್ಗೊಳ್ಳಲಿದ್ದಾರೆ. ಅ.1ರ ಕಾರ್ಯಕ್ರಮವು (ಸಂಜೆ 7ರಿಂದ ರಾತ್ರಿ 10.30ರವರೆಗೆ) ನಟ ಪುನೀತ್ ರಾಜ್‌ಕುಮಾರ್ ಹಾಡುಗಳಿಗೆ ಮೀಸಲಿಡಲಾಗಿದೆ. ಸೆ. 27ರಿಂದ 5 ದಿನ ಮಹಿಳಾ ಮತ್ತು ಮಕ್ಕಳ ದಸರಾ, ಸೆ.26ರಿಂದ 29ರವರೆಗೆ ದಸರಾ ಕ್ರೀಡಾಕೂಟ, ಸೆ.26ರಿಂದ 7 ದಿನಗಳವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಸೆ.26ರಿಂದ 90 ದಿನಗಳವರೆಗೆ ದಸರಾ ವಸ್ತುಪ್ರದರ್ಶನ ಇರಲಿದೆ. ಇದೇ ಮೊದಲಿಗೆ, ಕೈಗಾರಿಕಾ ದಸರಾ ಆಯೋಜಿಸಲಾಗಿದ್ದು, ಸಚಿವ ಮುರುಗೇಶ ನಿರಾಣಿ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.
ಹಲವು ತಾಣಗಳಿಗೆ ಒಂದು ಟಿಕೆಟ್ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ವಯಸ್ಕರಿಗೆ ₹500 ಹಾಗೂ ಮಕ್ಕಳಿಗೆ ₹250 ಕೊಟ್ಟು ಒಂದು ಕಡೆ ಟೆಕೆಟ್ ಖರೀದಿಸಿದರೆ ಮೈಸೂರು ಅರಮನೆ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ, ಮೃಗಾಲಯ ಹಾಗೂ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಪ್ರವೇಶಕ್ಕೆ ಅದನ್ನು ಬಳಸಬಹುದು. ಇದರಿಂದ ಟಿಕೆಟ್‌ಗಾಗಿ ಕ್ಯೂನಲ್ಲಿ ಕಾಯುವುದು ತಪ್ಪುತ್ತದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ವಿವಿಧ ಕಾರ್ಯಕ್ರಮಗಳ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥ ಸ್ವಾಮಿ, ಡಿಸಿಪಿ ಗೀತಾ ಪ್ರಸನ್ನ ಇದ್ದರು.